ಬೆಂಗಳೂರು: ಸಂಚಾರಿ ಪೊಲೀಸರು ಹಳೆಯ - ಹೊಸ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ದರ ಸಂಬಂಧ ಸ್ಪೆಷಲ್ ಡ್ರೈವ್ ನಡೆಸಿದ್ದಾರೆ.
ಈ ಬಗ್ಗೆ ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಹರಿಶೇಖರನ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಸರ್ಕಾರ, ಜನರ ಮತ್ತು ರಸ್ತೆ ಸುರಕ್ಷತೆ ಹಿತದೃಷ್ಟಿಯಿಂದ ಅಪಘಾತಗಳನ್ನು ತಡೆಯಲು ದಂಡದ ದರವನ್ನು ನೂರರಿಂದ ಸಾವಿರಕ್ಕೆ ಏರಿಸಿದೆ. ಇನ್ನೂ ಒಂದು ವಾರ, ಹಳೆಯ ದಂಡದ ದರವನ್ನೇ ಸಂಗ್ರಹಿಸಲಾಗುವುದು. ಒಂದು ವಾರದ ಬಳಿಕ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ದರದ ಬಗ್ಗೆ ಸೋಷಿಯಲ್ ಮೀಡಿಯಾಲ್ಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಕಡಿಮೆಯಾಗಲು ಹೊಸ ಫೈನ್ ಅನುಕೂಲವಾಗಲಿದೆ ಎಂದು ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಹೈಕೋರ್ಟ್ನಿಂದ ಹಲವು ನಿರ್ದೇಶನಗಳಿದ್ದು, ಅವುಗಳನ್ನು ಎಲ್ಲರೂ ಅನುಸರಿಸಬೇಕು. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ತಪ್ಪು. ಹಳೆಯ ಮತ್ತು ಹೊಸ ಫೈನ್ ಸೇರಿ 44 ಠಾಣಾ ವ್ಯಾಪ್ತಿಗಳಲ್ಲಿ ಸ್ಪೆಷಲ್ ಡ್ರೈವ್ ಮೂಲಕ ಇಂದು 14 ಲಕ್ಷ ದಂಡ ಸಂಗ್ರಹಿಸಿದ್ದೇವೆ. ನಗರದಲ್ಲಿ ಅಪಘಾತ ತಡೆಯಲು ಪರಿಷ್ಕೃತ ದಂಡ ಸಂಗ್ರಹವೇ ಸೂಕ್ತ ಪರಿಹಾರ. ನೂರು ರೂಪಾಯಿ ಫೈನ್ ಸುಲಭವಾಗಿತ್ತು ಎಂಬ ತಾತ್ಸಾರ ಜನರಲ್ಲಿ ಮೂಡಿ, ದಂಡ ಕಟ್ಟುವುದು ಮಾಮೂಲಿ ಆಗಿಬಿಟ್ಟಿತ್ತು. ಸರ್ಕಾರ ಸ್ವಾರ್ಥಕ್ಕಾಗಿ ಕಾನೂನು ಜಾರಿ ಮಾಡಿಲ್ಲ. ಸುರಕ್ಷತೆ ಮತ್ತು ಭದ್ರತೆಗಾಗಿ ಪರಿಷ್ಕೃತ ದರ ಜಾರಿ ಮಾಡಿದೆ ಎಂದು ಸಂಚಾರಿ ಹೆಚ್ಚುವರಿ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.