ಬೆಂಗಳೂರು: ಬೆಳ್ಳಂಬೆಳಗ್ಗೆ ನಡೆದ ಅಪಘಾತದಲ್ಲಿ ಇಬ್ಬರು ಪೌರಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿದ್ಯಾರಣ್ಯಪುರದಲ್ಲಿ ಸಂಭವಿಸಿದೆ.
ದ್ವಿಚಕ್ರ ವಾಹನದಲ್ಲಿ ತಾಯಿ ಮರಿಯಮ್ಮ ಮತ್ತು ಚಿಕ್ಕಮ್ಮ ಗೌರಮ್ಮನನ್ನು ಮಗ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದ. ಈ ವೇಳೆ ಎದುರಿನಲ್ಲಿ ತರಕಾರಿ ಆಟೋ ಬರುತ್ತಿದ್ದು, ಅದೇ ವೇಳೆಗೆ ಅದರ ಆಕ್ಸೆಲ್ ಕಟ್ ಆಗಿ ಎದುರು ಬದುರು ಡಿಕ್ಕಿ ಹೊಡೆದ ಪರಿಣಾಮ ಮರಿಯಮ್ಮ ಮತ್ತು ಚಿಕ್ಕಮ್ಮ ಮೃತಪಟ್ಟಿದ್ದಾರೆ.
ಸ್ಥಳದಲ್ಲೇ ಅತೀವ ರಕ್ತಸ್ರಾವ ಆಗಿದ್ದು ಸಿಂಗಾಪೂರು ಮುಖ್ಯರಸ್ತೆಯಲ್ಲಿ ಇರುವ ಅವೆಕ್ಷಾ ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿಮಧ್ಯೆ ಮೃತಪಟ್ಟಿದ್ದಾರೆ. ಮಗನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತಪಟ್ಟ ಪೌರಕಾರ್ಮಿಕರ ಅಂತ್ಯಕ್ರಿಯೆಗೆ ತಲಾ ಇಪ್ಪತ್ತು ಸಾವಿರ ಹಾಗೂ ಹತ್ತು ಲಕ್ಷ ಪರಿಹಾರ ನೀಡಲು ಪಾಲಿಕೆ ಮುಂದಾಗಿದೆ. ಜೊತೆಗೆ ಮನೆಯ ಒಬ್ಬರಿಗೆ ಕೆಲಸ ನೀಡುವ ನಿಯಮವಿದೆ ಎಂದು ಯಲಹಂಕ ಜಂಟಿ ಆಯುಕ್ತ ಅಶೋಕ್ ತಿಳಿಸಿದರು. ಮರಿಯಮ್ಮ ಮತ್ತು ಗೌರಮ್ಮ ಇಬ್ಬರಿಗೂ ಸುಮಾರು ನಲ್ವತ್ತು ವರ್ಷ ವಯಸ್ಸಾಗಿತ್ತು.