ಬೆಂಗಳೂರು : ಓವರ್ ಟೇಕ್ ಮಾಡುವ ಭರದಲ್ಲಿ ಆಯತಪ್ಪಿ ಬಿದ್ದು ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಸುಜಾತ ಥಿಯೇಟರ್ ಬಳಿಯ ಅಂಡರ್ ಪಾಸ್ ಬಳಿ ನಡೆದಿದೆ.
ಮೆಜೆಸ್ಟಿಕ್‌ನಿಂದ ರಾಜಾಜಿನಗರಕ್ಕೆ ಹೋಗುತ್ತಿದ್ದ ಬೈಕ್ ಸವಾರ ಬಿಎಂಟಿಸಿ ಬಸ್ ಹಿಂಬದಿ ಚಕ್ರಕ್ಕೆ ಬೈಕ್ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಬೈಕ್ ಸವಾರನ ಸಾವಿಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಸ್ಥಳದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಹೊತ್ತು ಸಂಚಾರ ದಟ್ಟಣೆಯಾಯಿತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಬೈಕ್ ಸವಾರನ ಶವ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತನ ಹೆಸರು, ವಿಳಾಸ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.