ಬೆಂಗಳೂರು: ಕೇಂದ್ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಮಹಾನಗರದಲ್ಲಿಯೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಪರಿಷ್ಕೃತ ದರ ಆದೇಶ ಅಧಿಕೃತವಾಗಿ ಜುಲೈ 20ರಿಂದ ಜಾರಿಗೆ ಬರಲಿದೆ. ಸಂಚಾರಿ ನಿಯಮಗಳನ್ನ ಉಲ್ಲಂಘಿಸುವ ಸವಾರರಿಗೆ ದಂಡದ ಬಿಸಿ ತಟ್ಟಲಿದೆ.
ವಾಹನ ಸವಾರರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ವರ್ಷದಿಂದ ವರ್ಷಕ್ಕೆ ಏರುತ್ತಿರುವ ರಸ್ತೆ ಅಪಘಾತಗಳನ್ನ ತಗ್ಗಿಸಲು ದಂಡದ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ದಂಡದ ಸಂಗ್ರಹ ಹೆಚ್ಚಳ ನಮ್ಮ ಪ್ರಮುಖ ಗುರಿಯಲ್ಲ. ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡದಂತೆ ಎಚ್ಚರಿಸಲು ಈ ಆದೇಶ ಜಾರಿಗೆ ತರಲಾಗುತ್ತಿದೆ.
ಪರಿಷ್ಕೃತ ದಂಡ ಹೆಚ್ಚಳ ಬಗ್ಗೆ ಸವಾರರಲ್ಲಿ ಅರಿವು ಮೂಡಿಸಲು ಈಗಾಗಲೇ ನಗರದಲ್ಲಿರುವ 44 ಸಂಚಾರಿ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಆಯಾ ಠಾಣಾ ವ್ಯಾಪ್ತಿಯಲ್ಲಿ ದಂಡದ ಬಗ್ಗೆ ಮುಖ್ಯ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ನಾಮಫಲಕ ಹಾಕಲಾಗುತ್ತಿದೆ. ಫೇಸ್ಬುಕ್, ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಷ್ಕೃತ ಆದೇಶದ ಕುರಿತು ಅರಿವು ಮೂಡಿಸಲಾಗುತ್ತಿದೆ.
ವೇಗದ ವಾಹನ ಚಾಲನೆಗೆ ₹ 500 ರಿಂದ ₹1 ಸಾವಿರ, ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ ₹1 ಸಾವಿರ , ಎರಡನೇ ಬಾರಿಗೆ ಸಿಕ್ಕಿಬಿದ್ದರೆ ₹ 2 ಸಾವಿರ, ನೋಂದಣಿಯಿಲ್ಲದೆ ವಾಹನ ಚಲಾಯಿಸಿದರೆ ಮೊದಲ ಬಾರಿಗೆ ₹5 ಸಾವಿರ, ಎರಡನೇ ಬಾರಿಗೆ ಸಿಕ್ಕಿಬಿದ್ದರೆ ₹10 ಸಾವಿರ, ಇನ್ಸುರೆನ್ಸ್ , ವಾಹನ ಪರವಾನಗಿ ಇಲ್ಲದಿದ್ದರೆ ₹1 ಸಾವಿರ ರೂ. ದಂಡ ಬೀಳಲಿದೆ.