ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳ ಬಾಡಿಗೆ ದರವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಮೋಟಾರು ವಾಹನಗಳ ಅಧಿನಿಯಮ 1988ರ ಕಲಂ 67ರ ಉಪಕಲಂ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಬಾಡಿಗೆ ದರ ಪರಿಷ್ಕರಿಸುವಂತೆ ಸರಕು ಸಾಗಣೆ ವಾಹನಗಳು ಬಹು ದಿನಗಳಿಂದ ಬೇಡಿಕೆ ಇಟ್ಟಿದ್ದವು. ಇದೀಗ ಸಾರಿಗೆ ಇಲಾಖೆ ಕೂಡಲೇ ಜಾರಿಗೆ ಬರುವಂತೆ ಬಾಡಿಗೆ ದರ ಪರಿಷ್ಕರಿಸಿ ಆದೇಶಿಸಿದೆ.
ಗೂಡ್ಸ್ ವಾಹನಗಳ ಬಾಡಿಗೆ ದರ ಏರಿಕೆಯಾಗಿದ್ದು ಏಷ್ಟು?: 6 ಚಕ್ರಗಳ ಲಾರಿಗೆ 8 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 37 ರೂ.ಗೆ ಬಾಡಿಗೆ ದರ ಏರಿಕೆ ಮಾಡಲಾಗಿದೆ. 6 ಚಕ್ರಗಳ ಲಾರಿಗೆ 12 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 50 ರೂ.ಗೆ ಹೆಚ್ಚಳ ಮಾಡಲಾಗಿದೆ. 10 ಚಕ್ರಗಳ ಲಾರಿಗೆ 19 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 60 ರೂ.ಗೆ ಬಾಡಿಗೆ ದರ ಏರಿಸಲಾಗಿದೆ.
12 ಚಕ್ರಗಳ ಲಾರಿಗೆ 25 ಮೆಟ್ರಿಕ್ ಟನ್ ಪತಿ ಕಿ.ಮೀ.ಗೆ 67 ರೂ.ಗೆ ಏರಿಕೆ ಮಾಡಲಾಗಿದೆ. 14 ಚಕ್ರಗಳ ಲಾರಿಗೆ 30 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 76 ರೂ.ಗೆ ಹೆಚ್ಚಿಸಲಾಗಿದೆ. 16 ಚಕ್ರಗಳ ಲಾರಿಗೆ 35 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 89 ರೂ.ಗೆ ಬಾಡಿಗೆ ದರ ಏರಿಕೆ ಮಾಡಿ ಪರಿಷ್ಕರಣೆ ಮಾಡಲಾಗಿದೆ.
ವಾಹನ ವೆಚ್ಚ, ನೋಂದಣಿ ವೆಚ್ಚ, ವಾಹನದ ತೆರಿಗೆ, ಬಿಡಿಭಾಗಗಳು, ವಿಮಾ ಪಾಲಿಸಿ ಹಾಗೂ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳ ಪರಿಷ್ಕರಣೆ ಅಗತ್ಯವೆಂದು ಸರ್ಕಾರ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಮೋಟಾರು ವಾಹನಗಳ ಅಧಿನಿಯಮ 1988ರ ಕಲಂ 67ರ ಉಪಕಲ ಅಡಿ 19-03 2002ರ ಅಧಿಸೂಚನೆಯನ್ನು ಪರಿಷ್ಕರಿಸಿ, ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕ ಸಾಗಣೆ ವಾಹನಗಳಿಗೆ ಬಾಡಿಗೆ ದರಗಳನ್ನು ನಿಗದಿಪಡಿಸಲು ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಾಣೆ ವಾಹನಗಳಿಗೆ ಬಾಡಿಗೆ ದರಗಳನ್ನು ಕೂಡಲೇ ಜಾರಿಗೆ ಬರುವಂತೆ ಬಾಡಿಗೆ ದರ ಪರಿಷ್ಕರಿಸಿ ಸರ್ಕಾರ ಆದೇಶಿಸಿದೆ.
ಗ್ರಾಹಕರ ಮೇಲೆ ಹೊರೆ: ಸರಕು ವಾಹನಗಳ ಬಾಡಿಗೆ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಸಾಗಾಟ ಸರಕು ವಾಹನಗಳ ಬಾಡಿಗೆ ದರ ಹೆಚ್ಚುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಗಳಿಂದ ಕಂಗೆಟ್ಟಿರುವ ಗ್ರಾಹಕರು ಇದೀಗ ಮತ್ತೊಂದು ಹೊರೆ ಬೀಳಲಿದೆ.
ತರಕಾರಿ, ದಿನಸಿ ಸೇರಿ ಇತರ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಜನರ ಜೇಬಿಗೆ ಇನ್ನುಷ್ಟು ಕತ್ತರಿ ಬೀಳುವ ಸಾಧ್ಯತೆ ಇದೆ. ಸರುಕು ಸಾಗಣೆ ವಾಹನಗಳ ಬಾಡಿಗೆ ದರ ಹೆಚ್ಚಳದ ಬಿಸಿ ಗ್ರಾಹಕರ ಮೇಲೂ ಬೀಳುವುದು ಖಚಿತ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ: ಡಿಕೆಶಿ ಹೇಳಿದ್ದೇನು?