ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನವಿಲ್ಲದೆ ರಾಜ್ಯದಲ್ಲಿ ಲಾಕ್ಡೌನ್ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ನಿಮಿಷವೂ ಎಲ್ಲವನ್ನು ಪರಿಶೀಲನೆ ಮಾಡುತ್ತದೆ. ಬೇಕೆಂದಾಗ ಲಾಕ್ಡೌನ್ ಮಾಡಿ, ಬೇಡವೆಂದಾಗ ಸಡಿಲ ಮಾಡುವುದಿಲ್ಲ. ಅದಕ್ಕೆ ತಜ್ಞರ ಸಮಿತಿ ಇದ್ದು, ತಜ್ಞರ ಸಮಿತಿ ವರದಿ ಆಧಾರದ ಮೇಲೆ ನುರಿತ ತಜ್ಞರ ಅಭಿಪ್ರಾಯದ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ವಾರ್ಡ್ನಲ್ಲಿ ಸೀಲ್ ಡೌನ್, ವಿಧಾನಸಭೆ ವ್ಯಾಪ್ತಿಯಲ್ಲಿ ಸೀಲ್ ಡೌನ್ ಈ ಎಲ್ಲವನ್ನು ತಜ್ಞರ ಸಮಿತಿ ವರದಿ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ. ಏರಿಯಾ ಬಂದ್ ಹಾಗೂ ಲಾಕ್ಡೌನ್ ವಿಚಾರ ಸೇರಿದಂತೆ ಕೊರೊನಾ ನಿಯಂತ್ರಣ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದರು.
ಎರಡು ಸಾವಿರ ಬೆಡ್
ರೋಗಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಬೆಡ್ ಇಲ್ಲವೆಂದು ಹೇಳಿದ ವಿಚಾರವಾಗಿ ಮಾತನಾಡಿ, ಬೆಡ್ ಇಲ್ಲವೆಂದು ಹೇಳುವ ಸಮಸ್ಯೆ ಬರಬಾರದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆ ಸೇರಿದಂತೆ ಇತರ ಕಡೆ 2 ಸಾವಿರ ಬೆಡ್ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಸರ್ಕಾರದಿಂದ ಶಿಫಾರಸು ಆಗಿರುವ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತೇವೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದೆ ಎಂದರು.