ಬೆಂಗಳೂರು: ರಾಮಮಂದಿರ ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದೆ ಎಂಬ ಹೆಚ್‌ಡಿಕೆ ಆರೋಪಕ್ಕೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ರಾಮನ ಲೆಕ್ಕ ಕೇಳಲು ಇವರು ಯಾರು, ಇವರಂತೂ ನಯಾಪೈಸೆ ಕೊಟ್ಟಿಲ್ಲ. ಕೊಡುವವರನ್ನು ಬೇಡ ಎನ್ನುವುದಕ್ಕೆ ಇವರು ಯಾರು ಎಂದು ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಶಾಸಕರು ದೇಣಿಗೆ ಕೊಟ್ಟಿದ್ದಾರೆ. ಇವರ ಮಾತನ್ನು ಅವರದೇ ಪಕ್ಷದ ಶಾಸಕರು ಕೇಳೋದಿಲ್ಲ. ಈಗಾಗಲೇ ಆರ್‌ಟಿಜಿಎಸ್, ಚೆಕ್, ಆನ್ಲೈನ್ ಮೂಲಕ ದೇಣಿಗೆ ನೀಡುವ ವ್ಯವಸ್ಥೆ ಇದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯನಿಗೆ ಟಾಂಗ್ :
ಇನ್ನು ಸಿದ್ದರಾಮಯ್ಯ ಅವರು ವಕೀಲರಾಗಿದ್ದವರು. ಸುಪ್ರೀಂಕೋರ್ಟ್ ಸ್ಪಷ್ಟವಾದ ತೀರ್ಪು ಕೊಟ್ಟಿದೆ. ಆ ತೀರ್ಪು ಬಗ್ಗೆ ಇವರಿಗೆ ನಂಬಿಕೆ ಇಲ್ಲ. ಇಷ್ಟ ಇದ್ದರೆ ದೇಣಿಗೆ ಕೊಡಲಿ, ಇಲ್ಲದಿದ್ದರೆ ಸುಮ್ಮನಿರಿ. ಕೊಡಬಾರದೆಂದು ಯಾಕೆ ಹೇಳಬೇಕು. ಮಸೀದಿ, ಚರ್ಚ್ ಕಟ್ಟುವ ಬಗ್ಗೆ ಏನಾದರೂ ಮಾತನ್ನಾಡಿದ್ದಾರಾ, ಹಿಂದೂಗಳನ್ನು ಹಿಯಾಳಿಸೋದೇ ಇವರ ಚಾಳಿಯಾಗಿದೆ ಎಂದು ಕಿಡಿಕಾರಿದರು.
ಶಾಸಕರಿಗೆ ಧಮ್ಕಿ ಹಾಕ್ತಾರೆ ಹೆಚ್‌ಡಿಕೆ :
ಬೆದರಿಕೆ ಹಾಕುತ್ತಾರೆ ಎಂಬ ಹೆಚ್‌ಡಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ರಾಮಮಂದಿರ ನಿರ್ಮಾಣಕ್ಕೆ ಕುಮಾರಸ್ವಾಮಿ ಒಂದು ಪೈಸೆಯನ್ನೂ ನೀಡಿಲ್ಲ. ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ದರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಧಮ್ಕಿ ಹಾಕಲು ಆಗುತ್ತಾ, ಇವರೇ ಶಾಸಕರಿಗೆ ಧಮ್ಕಿ ಹಾಕ್ತಾರೆ ಎಂದು ಟೀಕಿಸಿದರು.
ಅಯೋಧ್ಯೆಗೆ ತೆರಳಿ ದೇಣಿಗೆ ನೀಡಲು ಶಿವಲಿಂಗೇಗೌಡ ಮುಂದಾಗಿರುವ ಕುರಿತು ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನಾದರೂ ಮಾಡಲಿ ಬಿಡಿ. ಅವರೇ ಅಯೋಧ್ಯೆಗೆ ಹೋಗಿ ಕೊಡುತ್ತಾರೆಂದರೆ ಸಂತೋಷದ ವಿಚಾರ. ಹಿಂದೆ ದೇವೇಗೌಡರು, ಕುಮಾರಸ್ವಾಮಿ ಅವರು ಧರ್ಮದ ಬಗ್ಗೆ ಏನೇನು ಹೇಳಿದ್ದಾರೆ ಎಂದು ಗೊತ್ತಿದೆ. ದೇವೇಗೌಡರು ಮುಂದಿನ ಜನ್ಮದಲ್ಲಿ ಎಲ್ಲಿ ಜನ್ಮ ತಾಳಬೇಕು ಎಂದು ಹೇಳಿರುವುದು ಗೊತ್ತಿದೆ. ಧಾರ್ಮಿಕವಾಗಿ ರಾಷ್ಟ್ರದ ಜನ ರಾಮನನ್ನು ಒಪ್ಪಿಕೊಂಡಿದ್ದಾರೆ. ನೀವು ದೇಣಿಗೆ ಕೊಡುವುದಾದರೆ ಕೊಡಿ ಎಂದು ಹೇಳಿದರು.
ನಿಮ್ಮ ಮನೆ ಸರಿ ಮಾಡಿಕೊಳ್ಳಿ:
ಮೊದಲು ನಿಮ್ಮಶಾಸಕರಿಗೆ ಬುದ್ಧಿ ಹೇಳಿ. ನಿಮ್ಮ ಶಾಸಕರೆ ನಿಮ್ಮ ಮಾತು ಕೇಳಲ್ಲ, ನಿಮ್ಮ ಮನೆ ಮೊದಲು ಸರಿ ಮಾಡಿಕೊಳ್ಳಲಿ. ಆ ಮೇಲೆ ಬೇರೆಯವರಿಗೆ ಬುದ್ಧಿವಾದ ಹೇಳಿ ಎಂದು ಹೆಚ್ಡಿಕೆಗೆ ಟಾಂಗ್ ನೀಡಿದರು.
ಯಾವುದೇ ಜಾತಿ, ಸಮುದಾಯಗಳಿಗೆ ಅನ್ಯಾಯ ಆಗಬಾರದು. ಒಬ್ಬರಿಗೆ ಮೀಸಲಾತಿ ನೀಡುವುದರಿಂದ ಇತರ ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯ ಆಗಬಾರದು. ಒಕ್ಕಲಿಗ ಸಮುದಾಯದವರು ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿಗಳ ಜೊತೆ ನಾನು ಮಾತನಾಡ್ತೇನೆ ಎಂದು ತಿಳಿಸಿದರು.
ಓದಿ: ನಿಮ್ಮ ರಾಜಕೀಯಕ್ಕಾಗಿ ರಾಮನ ಹೆಸರು ಬಳಸಿಕೊಳ್ತಿದ್ದೀರಾ.. ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು
ತೀರಾ ಹಿಂದುಳಿದ ಸಮುದಾಯಗಳಿಗಾಗಿ ಅಂಬೇಡ್ಕರ್ ಮೀಸಲಾತಿ ತಂದಿದ್ದರು. ಅವರ ಮೂಲ ಆಶಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ರಾಜ್ಯದ ಎಲ್ಲ ಸಮಾಜದ ಸ್ವಾಮೀಜಿಗಳು, ನಾಯಕರು ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಕಾನೂನಾತ್ಮಾಕವಾಗಿ ಆಯೋಗ ಈ ಬಗ್ಗೆ ಚರ್ಚೆ ಮಾಡಿ ಅಧ್ಯಯನ ನಡೆಸಿ ವರದಿ ನೀಡುತ್ತದೆ. ಆ ನಂತರ ಸಚಿವ ಸಂಪುಟದಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ. ಸಿಎಂ ಯಡಿಯರಪ್ಪ ಅವರು ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತಿದ್ದಾರೆ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡ್ತಾರೆ. ಸ್ವಾಮೀಜಿಗಳು ದಯಮಾಡಿ ಈ ವಿಚಾರವಾಗಿ ಗಡುವು ನೀಡುವುದು ಬೇಡ ಎಂದು ಮನವಿ ಮಾಡಿದರು.