ಬೆಂಗಳೂರು: ಪ್ರವಾಹದಿಂದ ಇದುವರೆಗೆ 10 ಜನರ ಸಾವು ಸಂಭವಿಸಿದ್ದು, ಸಮರೋಪಾದಿಯಲ್ಲಿ ನೆರೆ ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಳೆಗೆ 6.3 ಲಕ್ಷ ಹೆಕ್ಟೇರ್ ಬೆಳೆಹಾನಿ ಸಂಭವಿಸಿದೆ. 993 ಜಾನುವಾರುಗಳು ಸಾವಿಗೀಡಾಗಿದ್ದು, 12700 ಮನೆಗಳಿಗೆ ಹಾನಿಯಾಗಿದೆ. ಇದಲ್ಲದೆ ನಷ್ಟದ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ. ರಸ್ತೆ, ಕಟ್ಟಡಗಳ ಹಾನಿ ವರದಿಯನ್ನು ಅವಲೋಕಿಸಲಾಗುತ್ತಿದ್ದು, ಆದಷ್ಟು ಬೇಗ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಲಬುರಗಿ, ವಿಜಯಪುರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ 14 ತಾಲೂಕುಗಳ 247 ಗ್ರಾಮಗಳನ್ನು ಪ್ರವಾಹ ಸಂಭವಿಸಬಹುದಾದ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. ಸುಮಾರು 136 ಗ್ರಾಮಗಳ 43,158 ಜನರನ್ನು ಸ್ಥಳಾಂತರಿಸಲಾಗಿದ್ದು, 5,016 ಜನರನ್ನು ಪ್ರವಾಹದಿಂದ ಪಾರು ಮಾಡಲಾಗಿದೆ. 233 ಕಾಳಜಿ ಕೇಂದ್ರಗಳನ್ನು ತೆರೆದು ಸುಮಾರು 38,676 ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದೆ ಎಂದು ತಿಳಿಸಿದರು.
ಪರಿಹಾರ ಪಾವತಿ ವಿವರ ಏನು?: ರಾಜ್ಯದ 30 ಜಿಲ್ಲೆಗಳ ಡಿಸಿಗಳಿಗೆ ಪಿಡಿ ಖಾತೆಯಲ್ಲಿ ಒಟ್ಟು 666.50 ಕೋಟಿ ರೂ. ಅನುದಾನ ಲಭ್ಯವಿದ್ದು, ಅನುದಾನದ ಕೊರತೆ ಇಲ್ಲ ಎಂದರು.
ಆಗಸ್ಟ್ 8 ರಂದು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಉ.ಕನ್ನಡ, ದ.ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಟ್ಟು 10 ಜಿಲ್ಲೆಗಳಿಗೆ ತಲಾ 5 ಕೋಟಿ ರೂ.ನಂತೆ 50 ಕೋಟಿ ಬಿಡುಗಡೆ ಮಾಡಲಾಗಿದೆ. ಉಡುಪಿ ಜಿಲ್ಲೆಗೆ ಅ.10ಕ್ಕೆ 17.93 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಅ. 21ರಂದು ವಿಜಯಪುರ, ಬೀದರ್ ಗೆ ತಲಾ 10 ಕೋಟಿ ರೂ. ಕಲಬುರಗಿ 20 ಕೋಟಿ, ಯಾದಗಿರಿ 15 ಕೋಟಿ, ರಾಯಚೂರು 5 ಕೋಟಿ ರೂ.ರಂತೆ 60 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ ನಲ್ಲಿ ಕನಿಷ್ಟ 20 ಕೋಟಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಎಸ್ಡಿಆರ್ಎಫ್ ನಡಿ ಪ್ರವಾಹ ಪರಿಹಾರವಾಗಿ 162.92 ಕೋಟಿ ರೂ. ಹಾಗೂ ರಕ್ಷಣಾ ಸಾಮಗ್ರಿಗಾಗಿ ಅಗ್ನಿ ಶಾಮಕ ಇಲಾಖೆಗೆ 20.09 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಪ್ರವಾಹದ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳಿಗೆ ನಾನು ಭೇಟಿಕೊಟ್ಟಿದ್ದೇನೆ. ಆಗಸ್ಟ್, ಸೆಪ್ಟಂಬರ್ ನಲ್ಲಿ 20 ಜಿಲ್ಲೆಗಳಲ್ಲಿ ಮನೆ ಹಾನಿ ಪರಿಹಾರವಾಗಿ 35.48 ಕೋಟಿ ರೂ.ಬಾಧಿತ ಕುಟುಂಬಗಳಿಗೆ ತಲಾ 10,000ದಂತೆ 12,300 ಕುಟುಂಬಗಳಿಗೆ ಪರಿಹಾರ ಪಾವತಿಸಲಾಗಿದೆ. ಉಳಿದವರಿಗೆ ಸದ್ಯದಲ್ಲೇ ಬಾಕಿ ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಎನ್‌ಡಿಎ ಅವಧಿಯಲ್ಲಿ ನಾಲ್ಕು ಪಟ್ಟು ಅಧಿಕ ಅನುದಾನ: ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ 724 ಕೋಟಿ ಎಸ್ ಡಿಆರ್ ಎಫ್, 2669 ಕೋಟಿ ರೂ ಎನ್ ಡಿಆರ್ ಎಫ್ ನಿಧಿ ಬಿಡುಗಡೆ ಮಾಡಲಾಗಿದೆ. ಆದರೆ, ಎನ್ ಡಿಎ ಸರ್ಕಾರದ ಅವಧಿಯಲ್ಲಿ 1332ಕೋಟಿ ಎಸ್ ಡಿ ಆರ್ ಎಫ್ ಹಾಗು 9279 ಕೋಟಿ ರೂ.ಎನ್ ಡಿಆರ್ ಎಫ್ ನಿಧಿ ಬಿಡುಗಡೆಯಾಗಿದೆ ಎಂದು ಅಂಕಿ-ಅಂಶ ಸಮೇತವಾಗಿ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಗಿಂತ ನಾಲ್ಕು ಪಟ್ಟು ಹೆಚ್ಚುವರಿ ಪ್ರವಾಹ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿಪಕ್ಷ ನಾಯಕರಿಗೆ ಕಾಮಾಲೆ ಕಣ್ಣು, ಹಳದಿ ಕನ್ನಡಕ ಹಾಕಿಕೊಂಡು ನೋಡುತ್ತಾರೆ. ವಿರೋಧ ಮಾಡಬೇಕು ಎಂದು ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಅವರಿಗೆ ಯಾವುದೇ ಸಮಸ್ಯೆಗಳೇ ಇರಲಿಲ್ಲ. ನೆಮ್ಮದಿಯಾಗಿದ್ದರು. ಆದರೂ ಸಂತ್ರಸ್ತರಿಗೆ ಅವರ ಕಾಲದಲ್ಲಿ ಗಂಜಿಕೊಡುತ್ತಿದ್ದರು. ಯಡಿಯೂರಪ್ಪ ಕಾಲದಲ್ಲಿ ಸಮಸ್ಯೆಗಳು ಸಾಕಷ್ಟಿದೆ. ಕೊರೊನಾ ಸಂಕಷ್ಟದಲ್ಲೂ ನೆರೆ ಸಂತ್ರಸ್ತರಿಗೆ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ ಎಂದು ಟಾಂಗ್ ನೀಡಿದರು.