ಬೆಂಗಳೂರು: "40 ವರ್ಷ ರಾಜಕೀಯ ಮಾಡಿದವರು, ಸಿಎಂ ಆದವರಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರಬಾರದಿತ್ತು" ಎಂದು ಸಚಿವ ಆರ್.ಅಶೋಕ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, "ಪ್ರವಾಹ ಬಂದಾಗ ಬಾರದ ಮೋದಿ ಈಗ ರಾಜ್ಯಕ್ಕೆ ಬರ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಅವರಿಗೆ ಸ್ವತಃ ಮನೆ ಇಲ್ಲ. ನೆಂಟರ ಮನೆಗೆ ಹೋಗಿ ಬರ್ತಾರೆ ಅಷ್ಟೇ. ಕಾಂಗ್ರೆಸ್ ಅವರಿಗೆ ಮನೆ ಅಲ್ಲ. ನೆಂಟರ ಮನೆ. ಸಿದ್ದರಾಮಯ್ಯಗೆ ಬೇರೆ ಕೆಲಸ ಇಲ್ಲ. ಅದಕ್ಕೆ ಕ್ಷೇತ್ರ ಹುಡುಕುವ ಪರಿಸ್ಥಿತಿಗೆ ಬಂದಿದ್ದಾರೆ. ಅವರ ಮನೆಯವರೆಲ್ಲ ಅವರ ಕ್ಷೇತ್ರಕ್ಕಾಗಿ ದೇವರ ಮೊರೆ ಹೋಗಿದ್ದಾರೆ" ಎಂದು ವ್ಯಂಗ್ಯವಾಡಿದರು.
"ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಹಾಗು ಯೋಗಿ ಎಲ್ಲರೂ ರಾಜ್ಯಕ್ಕೆ ಬರುತ್ತಿದ್ದಾರೆ. ನಮಗೆ ಸಮರ್ಥ ನಾಯಕತ್ವ ಇದೆ. ಅಭಿವೃದ್ಧಿ ಮಾಡಿದ್ದಾರೆ ಅದಕ್ಕೆ ಬರ್ತಿದ್ದಾರೆ. ಪ್ರವಾಹ ಬಂದಾಗ ಸಿದ್ದರಾಮಯ್ಯ ಅವರೇ ಕಾಣಿಸಲಿಲ್ಲ. ಅವರು ಪ್ರವಾಹ ಮುಗಿದ ಮೇಲೆ ಹೋಗಿ ಬಂದರು. ನಾನು ಒಂದು ಸವಾಲು ಹಾಕುತ್ತೇನೆ. ಈ ಹಿಂದೆ ಪ್ರವಾಹ ಬಂದಾಗ ಆಗಿನ ಮನಮೋಹನ್ ಸಿಂಗ್ ಏನು ಮಾಡಿದ್ರು?. ನೀವು ಎಷ್ಟು ಪರಿಹಾರ ಕೊಟ್ಟಿದ್ದೀರಿ.? ನಾವು ಎಷ್ಟು ಕೊಟ್ಟಿದ್ದೇವೆ ಎನ್ನುವುದನ್ನು ಚರ್ಚೆ ಮಾಡೋಣ. ಪ್ರವಾಹದ ವೇಳೆ ನಾನು, ಸಿಎಂ ಬಿಎಸ್ವೈ ಎಲ್ಲರೂ ಸೇರಿ 15 ಜಿಲ್ಲೆಗಳ ಪ್ರವಾಸ ಮಾಡಿದ್ದೆವು. ಪ್ರಧಾನಿ ಮೋದಿ ಅದಕ್ಕೆ ಸಲಹೆ ನೀಡಿದ್ದರು" ಎಂದು ತಿರುಗೇಟು ನೀಡಿದರು.
"ಮೋದಿ 9 ವರ್ಷದಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಲೆಕ್ಕ ಕೋಡುತ್ತೇವೆ. ಕಾಂಗ್ರೆಸ್‌ನವರೂ ಲೆಕ್ಕ ಕೊಡಲಿ ಎಂದು ಸವಾಲೆಸೆದ ಆರ್.ಅಶೋಕ್, ನಮ್ಮಲ್ಲಿ ಬೇಕಾದಷ್ಟು ಲೀಡರ್ಸ್ ಇದ್ದಾರೆ. ಕಾಂಗ್ರೆಸ್ನಲ್ಲಿ ಒಬ್ಬ ಲೀಡರ್ ತೋರಿಸಿ. ಸಿಎಂ ಖುರ್ಚಿಗೆ ಟವಲ್ ಹಾಕೋರು ಮಾತ್ರ ಇದ್ದಾರೆ" ಎಂದು ಕಿಡಿ ಕಾರಿದರು.
ಮಂಡ್ಯ ಉಸ್ತುವಾರಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, "ನನಗೆ ಗ್ರಾಮ ವಾಸ್ತವ್ಯ, ತಾಂಡಾಗಳ ಹಕ್ಕುಪತ್ರ ಸೇರಿ ಹಲವು ಕೆಲಸ ಇದೆ. ಬೆಂಗಳೂರಿನಲ್ಲಿ ಕೆಂಪೇಗೌಡ ಸೇರಿ ಕೆಲವು ಪ್ರತಿಮೆ ಆಗಬೇಕಿದೆ. ಹೀಗಾಗಿ ನಾನು ಉಸ್ತುವಾರಿಗೆ ರಾಜೀನಾಮೆ ಕೊಟ್ಟಿದ್ದೇನೆ. ಉಸ್ತುವಾರಿ ಕೊಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅವರ ವಿವೇಚನೆ ಅಂತೆ ಉಸ್ತುವಾರಿ ನೇಮಕ ಮಾಡುತ್ತಾರೆ" ಎಂದು ತಿಳಿಸಿದರು.
ಮನೀಶ್ ಸಿಸೋಡಿಯಾ ಬಂಧನಕ್ಕೆ ಪ್ರತಿಕ್ರಿಯಿಸಿ, "ಸಿಬಿಐ, ಐಟಿಗೆ ಸ್ವತಂತ್ರ ಸಂಸ್ಥೆ. ಇವರ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರನ್ನು ಯಾಕೆ ಬಂಧಿಸಿದ್ರು?. ಆಮ್ ಆದ್ಮಿ ಪಕ್ಷ ಒಂದೇ ಅಲ್ಲ, ಕಾಂಗ್ರೆಸ್ ಕೂಡ ಈ ವಿಚಾರಕ್ಕೆ ರಿಯಾಕ್ಟ್ ಮಾಡಿದ್ದಾರೆ. ಮನೀಶ್ ಸಿಸೋಡಿಯಾ ಒಬ್ಬರೇ ಅಲ್ಲ, ಈ ಮೊದಲು ಒಬ್ಬ ಸಚಿವ ಬಂಧನ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆಗಬೇಕು. ಬಿಜೆಪಿ ಎಂದೂ ಕೂಡ ಸೇಡಿನ ರಾಜಕಾರಣ ಮಾಡಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ವಿಮಾನ ನಿಲ್ದಾಣ ಇಡೀ ಮಲೆನಾಡಿನ ಕನಸು ನನಸಾಗುವ ಸಂಕೇತ: ಬಿ.ಎಸ್.ಯಡಿಯೂರಪ್ಪ