ಬೆಂಗಳೂರು: ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ತಡೆ ಒಡ್ಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಈಗಿನ ಸರ್ಕಾರ ಹಣ ಮಂಜೂರು ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಶೂನ್ಯ ವೇಳೆಯಲ್ಲಿ ನಿಯಮ 60ರಡಿ ವಿಷಯ ಪ್ರಸ್ತಾಪಿಸಲು ಯತ್ನಿಸಿದ ಅವರು, ಹಿಂದಿನ ಸರ್ಕಾರ ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ಈಗಿನ ಸರ್ಕಾರ ತಡೆ ನೀಡಿದೆ ಎಂದರು. ಸರ್ಕಾರ ನೀಡಿದ ತಡೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲಿ ಎಲ್ಲಾ ಕಾಮಗಾರಿಗಳು ಸ್ಥಗಿತವಾಗಿವೆ. ಆದರೆ, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಇರಬಹುದು, ಇನ್ಯಾವುದೇ ಕೆಲಸ ಇರಬಹುದು. ಎಲ್ಲವನ್ನೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮಂಜೂರು ಮಾಡಲಾಗುತ್ತಿದೆ, ಇದು ಸರಿಯಲ್ಲ. ಬೇಕಿದ್ದರೆ ಈ ಸದನದಲ್ಲಿ ಒಂದು ನಿರ್ಣಯ ಅಂಗೀಕರಿಸಿ. ಸರ್ಕಾರ ನಮ್ಮದು, ಹೀಗಾಗಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡುತ್ತೇವೆ ಎಂದು ಹೇಳಿ. ನಾವು ಸುಮ್ಮನಿದ್ದು ಬಿಡುತ್ತೇವೆ ಎಂದು ಹೇಳಿದರು. ಆದರೆ ಈ ಪ್ರಸ್ತಾಪವನ್ನು ನಿಯಮ 69ಕ್ಕೆ ಪರಿವರ್ತಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಂತರ ಮಾತನಾಡಲು ಅವಕಾಶ ನೀಡುವುದಾಗಿ ಹೇಳಿದರು.