ಆನೇಕಲ್(ಬೆಂಗಳೂರು): ಕೊರೊನಾ ಲಾಕ್ಡೌನ್ನಿಂದಾಗಿ ಮೃಗಾಲಯಗಳು ಬಂದ್ ಆಗಿರುವುದರಿಂದ ಪ್ರಾಣಿಗಳ ನಿರ್ವಹಣೆ ಕಷ್ಟಕರವಾಗಿತ್ತು. ಇದನ್ನು ಅರಿತ ವಾಯುನೆಲೆ ನಿವೃತ್ತ ವಿಂಗ್ ಕಮಾಂಡರ್ ಒಬ್ಬರು ಜಿರಫೆಯೊಂದನ್ನು ದತ್ತು ಪಡೆದಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಪ್ರಾಣಿ ಪ್ರಿಯರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶಾಸಕರು ಸೇರಿದಂತೆ ಹಲವು ಪಾಲಿಕೆ ಸದಸ್ಯರು ಆನೆ ಹಾಗೂ ಹುಲಿ ದತ್ತು ಪಡೆದ ಬೆನ್ನಲ್ಲೇ ವಾಯುನೆಲೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ, ಜಿರಾಫೆಯೊಂದನ್ನು ದತ್ತು ಪಡೆದು ತಮ್ಮ ಪ್ರಾಣಿ ಪ್ರೀತಿಯನ್ನು ತೋರಿದ್ದಾರೆ.
ಉದ್ಯಾನವನದ ಹೊಸ ಅತಿಥಿಯಾಗಿ ಆಗಮಿಸಿದ್ದ ಜಿರಾಫೆ ಯಧುನಂದನ್‍ನನ್ನು ದತ್ತು ಪಡೆಯಲು ನಿಗದಿಯಾಗಿದ್ದ ಒಂದು ಲಕ್ಷ ರೂ. ಚೆಕ್ ನೀಡಿ ದತ್ತು ಪಡೆದ್ದಾರೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿನ ಕೃಷ್ಣರಾಜ ಮತ್ತು ಬಬ್ಲಿ ಜೋಡಿಗೆ ಜನಿಸಿದ ಒಂದು ವರ್ಷ ಆರು ತಿಂಗಳ ಗಂಡು ಜಿರಾಫೆ ಯಧುನಂದನ್, ಕಳೆದ ತಿಂಗಳಷ್ಟೇ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿತ್ತು.
ಈ ಕುರಿತು ಮಾಹಿತಿ ನೀಡಿರುವ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್‍ಸಿಂಗ್, ಇದೇ ಮೊದಲ ಬಾರಿಗೆ ಉದ್ಯಾನವನದ ಜಿರಾಫೆಯೊಂದನ್ನು ದತ್ತು ಪಡೆದಿದ್ದು, ಅದೂ ನಿವೃತ್ತ ವಿಂಗ್ ಕಮಾಂಡರ್ ದತ್ತು ಪಡೆದಿದ್ದಕ್ಕೆ ಸಂತಸ ತಂದಿದೆ.
ಪ್ರಾಣಿಗಳನ್ನು ದತ್ತು ಪಡೆಯುವ ಪ್ರಕ್ರಿಯೆಯಿಂದ ಉದ್ಯಾನವನಕ್ಕೆ ಆದಾಯ ಸಂಗ್ರಹ ಮಾಡುವುದೇ ಅಲ್ಲ. ಇದರ ಮೂಲಕ ಜನರಲ್ಲಿ ವನ್ಯ ಜೀವಿಗಳಡೆಗೆ ಪ್ರೀತಿ ಮತ್ತು ಆಸಕ್ತಿ ಮೂಡಿಸುವುದು ಹಾಗೂ ಸಂರಕ್ಷಣೆಗೆ ನಾಗರಿಕರನ್ನು ತೊಡಗಿಸಿಕೊಳ್ಳುವುದು ಎಂದು ಹೇಳಿದರು.
ಕಳೆದ ತಿಂಗಳು ಉದ್ಯಾನವನದಲ್ಲಿ ಪ್ರಾಣಿಗಳ ದತ್ತು ಸ್ವೀಕಾರದ ದರಗಳನ್ನು ಪುನರ್ ಪರಿಶೀಲಿಸಿದ ಬಳಿಕ ಸುಮಾರು 79 ಮಂದಿ ಪ್ರಾಣಿ ಪ್ರಿಯರು 95 ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಇದರಿಂದ ಉದ್ಯಾನವನಕ್ಕೆ 15,50,500 ರೂ. ಹಣ ಸಂಗ್ರಹವಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್‍ಸಿಂಗ್ ತಿಳಿಸಿದ್ದಾರೆ.