ಬೆಂಗಳೂರು: ಶಿವರಾಮ ಕಾರಂತ್ ಬಡಾವಣೆ ಸ್ಥಗಿತಗೊಳ್ಳುವುದಿಲ್ಲ. ಜನ ತಪ್ಪು ಮಾಹಿತಿಗೆ ಕಿವಿಕೊಡಬಾರದು. ಆದಷ್ಟು ಬೇಗ ದಾಖಲೆಗಳನ್ನು ನೀಡಬೇಕು. ಎಪ್ರಿಲ್ 30 ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನ ಎಂದು ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ 03-08-2018ರ ಮೊದಲು ನಿರ್ಮಾಣವಾದ ಕಟ್ಟಡಗಳ ಮಾಹಿತಿ, ದಾಖಲೆ ಪಡೆಯಲು ಸುಪ್ರೀಂಕೋರ್ಟ್ ಸಮಿತಿ ರಚಿಸಿದ್ದು, ದಾಖಲೆಗಳನ್ನು ಪಡೆದು ಪರಿಶೀಲಿಸಿ ಸುಪ್ರೀಂಕೋರ್ಟ್ಗೆ ವರದಿ ನೀಡಬೇಕಿದೆ. ಆದರೆ ಜನಗಳಿಗೆ ಕೆಲವರ ಮಾಹಿತಿಯಿಂದ ಗೊಂದಲ ಉಂಟಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾಹಿತಿ ಕೊಡುತ್ತಿಲ್ಲ.
ಕೋಡಿಹಳ್ಳಿ ಚಂದ್ರಶೇಖರ್ ಈ ಲೇಔಟ್ ಸ್ಥಗಿತಗೊಂಡಿದೆ. ಮುಖ್ಯಮಂತ್ರಿಗಳು ಆಶ್ವಾಸನೆಯನ್ನೂ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಈ ರೀತಿ ಭಿತ್ತಿಪತ್ರ ಅಂಟಿಸಿರುವುದರಿಂದ ಜನರಿಗೆ ಗೊಂದಲ ಉಂಟಾಗಿ ಹೆಚ್ಚು ಮಾಹಿತಿ ಕೊಡುತ್ತಿಲ್ಲ. ಈ ಬಗ್ಗೆ ರೈತ ಮುಖಂಡರಿಗೂ ನೋಟಿಸ್ ಕೊಡಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಬಡಾವಣೆಗೆ ನಿಯೋಜಿತ ಜಾಗದಲ್ಲಿ ಕೆಲವರು ರೆವೆನ್ಯೂ ಲೇಔಟ್ನಲ್ಲಿ ಸೈಟ್ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೂ ಸಹಾಯ ಮಾಡುವ ನಿಟ್ಟಿನಲ್ಲಿ ಅಧ್ಯಯನ ಆಗ್ತಿದೆ. ಸುಪ್ರೀಂಕೋರ್ಟ್ ಅಂಜನಾಪುರ, ಬನಶಂಕರಿ, ವಿಶ್ವೇಶ್ವರ ಲೇಔಟ್ನಲ್ಲಿ ನಿವೇಶನ ಕಳೆದುಕೊಂಡವರಿಗೆ ಹೇಗೆ ಪರಿಹಾರ ನೀಡಲಾಗಿದೆ. ಅದರ ಸಂಪೂರ್ಣ ಅಧ್ಯಯನ ಮಾಡಲೂ ತಿಳಿಸಿದ್ದಾರೆ ಎಂದರು.
ಸದ್ಯ 1,850 ಜನ ಮಾತ್ರ ಕಟ್ಟಡಗಳ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ 350 ಜನ ಆನ್ಲೈನ್ ಮೂಲಕ ಸಲ್ಲಿಕೆ ಮಾಡಿದ್ದಾರೆ. ಸ್ಯಾಟಲೈಟ್ ಮ್ಯಾಪಿಂಗ್ ಪ್ರಕಾರ 7,500 ಕಟ್ಟಡಗಳಿವೆ. ಆದರೆ ಮಾಹಿತಿ ನೀಡಲು ಜನರು ಮುಂದೆ ಬರುತ್ತಿಲ್ಲ. ಜನ ಹೆಚ್ಚು ಸಂಖ್ಯೆಯಲ್ಲಿ ಬರಬಹುದು, ತಿಂಗಳಿಗೆ 4 ಸಾವಿರ ಬರಬಹುದೆಂಬ ಎಂಬ ನಿರೀಕ್ಷೆಯಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಹೆಚ್ಚಿದ ತಾಪಮಾನ: ಉತ್ತರ ಕರ್ನಾಟಕ ಭಾಗದ ಕೋರ್ಟ್ ಕೆಲಸದ ಅವಧಿಯಲ್ಲಿ ಬದಲಾವಣೆ