ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಕಾಲೆಳೆದುಕೊಂಡ ಪ್ರಸಂಗ ನಡೆಯಿತು.
ಸದನ ಆರಂಭವಾಗುತ್ತಿದ್ದಂತೆಯೇ ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರತಿಧ್ವನಿಸಿತು. ಈ ವೇಳೆ ಎದ್ದು ನಿಂತು ಮಾತನಾಡಲು ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಮುಂದಾದರು. ಆಗ ಖಾದರ್ ಅವರೇ ಕಾಂಗ್ರೆಸ್ ಕಥೆ ಮುಗಿತಲ್ಲ, ಜೈ ಶ್ರೀರಾಮ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಹೇಳಿದರು.
ಈ ವೇಳೆ ಮಾತನಾಡಲು ಸಚಿವ ಕೆ.ಎಸ್. ಈಶ್ವರಪ್ಪ ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಈಶ್ವರಪ್ಪನವರಂತೂ ಸಿಎಂ ಆಗಲ್ಲ, ಯಾಕೆ ಇಷ್ಟು ಮಾತಾಡ್ತಾರೋ ಎಂದು ಕಾಲೆಳೆದರು.
ಇದನ್ನೂ ಓದಿ: ಜನ ಮೋದಿ ನೇತೃತ್ವದ ಸರ್ಕಾರವನ್ನು ನಂಬಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿ: ಬಿಎಸ್ವೈ
ಈ ವೇಳೆ ಸದನದಲ್ಲಿ ಜೈ ಹನುಮಾನ್ ಘೋಷಣೆ ಕೇಳಿ ಬಂತು. ಯತ್ನಾಳ್ಗೆ ಕಾಂಗ್ರೆಸ್ ನೆನಪಲ್ಲದೆ ಬೇರೆ ಏನು ನೆನಪಿಲ್ಲ ಎಂದು ಯು.ಟಿ ಖಾದರ್ ಹೇಳಿದರು. ಇದಕ್ಕೆ ಜೈ ಶ್ರೀರಾಮ್ ಎಂದು ಯತ್ನಾಳ್ ಘೋಷಣೆ ಕೂಗಿದರು. ಕಾಂಗ್ರೆಸ್ಗೆ ಬೀಗ, ಇತರ ಕಡೆ ಬಿಡಿ ಪಂಜಾಬ್ನಲ್ಲೂ ಹಿಂಗಾಗೋದಾ? ಎಂದು ಬಿಜೆಪಿ ಸದಸ್ಯರು ಖಾದರ್ ಅವರ ಕಾಲೆಳೆದರು. ಇದಕ್ಕೆ ತಿರುಗೇಟು ನೀಡಿದ ಖಾದರ್, ಇತಿಹಾಸ ಮತ್ತೆ ಪುನರ್ ನಿರ್ಮಾಣ ಆಗುತ್ತದೆ ಎಂದರು.
ಈಗ ಪ್ರಶ್ನೋತ್ತರ ಇದೆ, ಎಲ್ಲರೂ ಪ್ರಶ್ನೆ ಕೇಳಿ ಎಂದು ಸ್ಪೀಕರ್ ಹೇಳಿದಾಗ, ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಯಿತು.