ಬೆಂಗಳೂರು: ಶಿವಾಜಿನಗರದ ಚಾಂದಿನಿ ಚೌಕ್ ಪ್ರದೇಶ ಕೊರೊನಾ ಹಾಟ್ ಸ್ಪಾಟ್ ಆಗಿತ್ತು. ಒಂದೇ ಕಟ್ಟಡದಲ್ಲಿದ್ದ ಒಬ್ಬ ವ್ಯಕ್ತಿಯಿಂದ 44 ಜನಕ್ಕೆ ಕೊರೊನಾ ಹರಡಿದ್ದರಿಂದ ಚಾಂದಿನಿ ಚೌಕ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು.
ಕೊರೊನಾ ಶಂಕೆಯ ಹಿನ್ನೆಲೆ ಸ್ಥಳೀಯ 22 ಮನೆಗಳ 84 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ಯಾರ ವರದಿಯಲ್ಲೂ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿಲ್ಲ. ಮೇ ತಿಂಗಳಲ್ಲೇ ಚಾಂದಿನಿ ಚೌಕ್ ನಿವಾಸಿಗಳ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಆದರೆ, ಈವರೆಗೂ ಯಾವುದೇ ವರದಿ ಬಂದಿಲ್ಲ. ಆರೋಗ್ಯ ಇಲಾಖೆ ಈ ಹಿಂದೆಯೇ ನೀಡಿದ ಸೂಚನೆ ಪ್ರಕಾರ ಪಾಸಿಟಿವ್ ಇದ್ರೆ ಮಾತ್ರ ತಕ್ಷಣ ರಿಪೋರ್ಟ್ ನೀಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆ ಪಾಸಿಟಿವ್ ರಿಪೋರ್ಟ್ ಯಾವುದೂ ಬಾರದ ಕಾರಣ ಎಲ್ಲರದ್ದೂ ನೆಗೆಟಿವ್ ಎಂದು ತಿಳಿದಿದೆ. ನಾಳೆ ಈ ಪ್ರದೇಶದ ಸೀಲ್‌ಡೌನ್ ಅವಧಿ ಮುಕ್ತಾಯವಾಗಲಿದೆ. ಭಾನುವಾರದಿಂದ ಈ ಪ್ರದೇಶದಲ್ಲಿ ಯಾವುದೇ ನಿರ್ಬಂಧ ಇರೋದಿಲ್ಲ ಅಂತಾ ಈಟಿವಿ ಭಾರತ್ಗೆ ಶಿವಾಜಿನಗರ ಆರೋಗ್ಯಾಧಿಕಾರಿ ಶ್ರೀ ಕಂಠೇಗೌಡ ತಿಳಿಸಿದರು.
ಶಿವಾಜಿನಗರದಲ್ಲಿ ರಿಜೆಂಟ್ ಹೋಟೆಲ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ 44 ಜನಕ್ಕೆ ಕೊರೊನಾ ಹರಡಿತ್ತು. ಇವರೆಲ್ಲರೂ ವಲಸೆ ಕಾರ್ಮಿಕರಾಗಿದ್ದರು. ಒಂದೇ ಕಟ್ಟಡದಲ್ಲಿದ್ದ 73 ಜನರಿಗೆ ಈ ಭೀತಿ ಇತ್ತು. ಜೊತೆಗೆ ಅವರು ಸ್ಥಳೀಯವಾಗಿ ಓಡಾಡಿ ಕೊರೊನಾ ಹರಡಿರುವ ಸಾಧ್ಯತೆ ಇತ್ತು. ಆದರೆ, ಯಾರದ್ದೂ ಪಾಸಿಟಿವ್ ವರದಿ ಬಾರದ ಕಾರಣ ಕೊರೊನಾ ಮಹಾಮಾರಿಯಿಂದ ಬಚಾವಾಗಿದ್ದಾರೆ.
ಭಾನುವಾರದಿಂದ ಇವರೂ ಕೂಡ ಸ್ವತಂತ್ರವಾಗಿ ಓಡಾಡಬಹುದಾಗಿದೆ. ಜೂನ್ 8ರಿಂದ ಶಿವಾಜಿನಗರ ಮಾರುಕಟ್ಟೆ, ರೆಸೆಲ್ ಮಾರುಕಟ್ಟೆ ತೆರೆಯುವ ಬಗ್ಗೆ ಸಭೆಗಳು ನಡೆಯುತ್ತಿವೆ.