ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಭಯವೂ ದ್ವಿಗುಣಗೊಂಡಿದೆ. ಇದರ ಪರಿಣಾಮ ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲೆಸಿರುವ ಮಂದಿ ತಮ್ಮ ಮೂಲ ಊರುಗಳತ್ತ ಮರಳುತ್ತಿದ್ದಾರೆ.
ಬೆಂಗಳೂರು ಹೊರವಲಯದ ಕೆ.ಆರ್ ಪುರ ಮತ್ತು ಐಟಿ-ಬಿಟಿ ಕ್ಷೇತ್ರ ಮಹದೇವಪುರ ಪ್ರದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ದಿನಕ್ಕೆ ಹತ್ತಾರು ಮನೆಗಳು ಖಾಲಿಯಾಗುತ್ತಿವೆ.
ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಜನರು ಭೀತಿಗೆ ಒಳಗಾಗಿದ್ದಾರೆ. ಹೀಗಾಗಿ ಮತ್ತೆ ಲಾಕ್ಡೌನ್ ಹೇರುವ ಭಯದಲ್ಲಿ ಕೆಲವರು ತಮ್ಮ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದಾರೆ. ಮಹದೇವಪುರ ಮತ್ತು ಕೆ.ಆರ್ ಪುರದಿಂದ ಕೋಲಾರ, ಆಂಧ್ರಪ್ರದೇಶ, ತಮಿಳು ನಾಡು ಕಡೆ ವಾಹನದಲ್ಲಿ ಮನೆ ವಸ್ತುಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಕೊರೊನದಿಂದ ಕಳೆದ 8 ತಿಂಗಳಿಂದ ಖಾಲಿ ಇದ್ದ ಮನೆಗಳಿಗೆ ಬಾಡಿಗೆದಾರರು ಬಂದಿದ್ದರು ಈಗ ಮತ್ತೆ ಮನೆ ಖಾಲಿ ಮಾಡುತ್ತಿರುವುದು ಮನೆಮಾಲೀಕರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ.
ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಕೊರೊನಾಘಾತ: ಒಂದೇ ದಿನ 5 ಸಾವಿರ ದಾಟಿದ ಕೇಸ್, ಬೆಂಗಳೂರಲ್ಲೇ ಹೆಚ್ಚು!