ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನರಿಗೆ ಬೂಸ್ಟರ್ ಡೋಸ್ ನೀಡಲು ಕೋವಿಶೀಲ್ಡ್ ಲಸಿಕೆ ಕೊರತೆಯಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಕೋವ್ಯಾಕ್ಸಿನ್ ಸ್ಟಾಕ್ ಇದೆ. ಆದರೆ ಕೋವಿಶೀಲ್ಡ್ ಲಭ್ಯವಿಲ್ಲ. ವ್ಯಾಕ್ಸಿನೇಷನ್ ಡ್ರೈವ್ ಸಮಯದಲ್ಲಿ ಶೇ 90 ರಷ್ಟು ಜನರು ಕೋವಿಶೀಲ್ಡ್ ಪಡೆದಿದ್ದರೆ, ಶೇ10 ರಷ್ಟು ಜನರು ಮಾತ್ರ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಸದ್ಯ ಈಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನರಿಗೆ ತಿಳಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ ಮಾರ್ಗಸೂಚಿಗಳು ಬಿಬಿಎಂಪಿ ವ್ಯಾಪ್ತಿಗೂ ಅನ್ವಯವಾಗಲಿದೆ. ಸಂಘ-ಸಂಸ್ಥೆಗಳಿಂದ ಬರುವ ಸಲಹೆಗಳನ್ನು ಪಡೆದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಾರೆ ಎಂದು ಹೇಳಿದರು.
ಕೋವಿಡ್ ಪಾಸಿಟಿವಿಟಿ ದರದಲ್ಲಿ ವ್ಯತ್ಯಾಸವಿಲ್ಲ: ನಗರದಲ್ಲಿ ಪಾಸಿಟಿವ್ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಆದರೂ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮತ್ತು ಆಕ್ಸಿಜನ್ ಪ್ಲಾಂಟ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಆದರೆ ಎಲ್ಲಾ ವಸ್ತುಗಳನ್ನು ಖರೀದಿ ಮಾಡಿಕೊಂಡು ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಏನಿದು ಬಿಎಫ್ 7 ಕೋವಿಡ್ ವೆರಿಯಂಟ್? ತೀವ್ರತೆ ಎಷ್ಟು? ಇಲ್ಲಿದೆ ಮಾಹಿತಿ..!