ಬೆಂಗಳೂರು : ಮಾರ್ಚ್ನಿಂದ ಮೇವರೆಗೆ ಬಾಕಿ ಇರುವ ಜಿಎಸ್‌ಟಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ಮಾತಮಾಡಿದ ಅವರು, ಮಾರ್ಚ್ನಿಂದ ಮೇವರೆಗೆ 10,208 ಕೋಟಿ ರೂ. ಜಿಎಸ್‌ಟಿ ಹಣ ಬರಬೇಕು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅದರಲ್ಲೂ ಮಾರ್ಚ್ ತಿಂಗಳ 1,460 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಕೇಳಿದ್ದೇವೆ ಎಂದರು.
ಹಣಕಾಸು ಸಚಿವರು ಡಿಸೆಂಬರ್ನಿಂದ ಫೆಬ್ರವರಿ ತಿಂಗಳಿನ 4,314 ಕೋಟಿ ನಮ್ಮ ರಾಜ್ಯದ ಪರಿಹಾರ ಹಣ ನೀಡಿದ್ದಾರೆ. ಕೇಂದ್ರದ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಇದರ ನಡುವೆಯೂ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ ಹಣವನ್ನ ನೀಡಬೇಕಿದೆ. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಇದೆ. ಈ ಬಗ್ಗೆ ಕೇಂದ್ರದ ಹಣಕಾಸು ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದರು.
ಜಿಎಸ್‌ಟಿ ತೆರಿಗೆ ರಿಟರ್ನ್ ಫೈಲಿಂಗ್ ಜುಲೈ ಮಧ್ಯವರೆಗೂ ವಿಸ್ತರಿಸಲಾಗಿದೆ. ಈ ಹಿನ್ನೆಲೆ ಲೇಟ್ ಫೀಯನ್ನು ಶೇ.18 ರಿಂದ 9ಕ್ಕಿಳಿಸಲು ತೀರ್ಮಾನ ಆಗಿದೆ. ಮುಂಬರುವ ದಿನದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪರಿಹಾರ ಹಣ ನೀಡುವಲ್ಲಿ ವಿಳಂಬ ಮಾಡಬಾರದು. ರಾಜ್ಯಕ್ಕೆ ಜಿಎಸ್‌ಟಿ ಕೌನ್ಸಿಲ್ ಬೇರೆ ಮೂಲಗಳಿಂದ ಹಣ ಪಡೆಯಲು ಮಾರ್ಗ ಹುಡುಕಬೇಕು ಎಂದರು.
ರಾಜ್ಯದ ಜಿಎಸ್‌ಟಿ ಪಾಲು ಇರುವಷ್ಟು ಸಾಲ ಪಡೆಯಲು ಯಾವುದೇ ಷರತ್ತು ಇಲ್ಲದೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಕೇಂದ್ರ ಹಣಕಾಸು ಸಚಿವರು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.