ಬೆಂಗಳೂರು: ಪ್ರತಿಷ್ಟಿತ ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಬಳಸಿ, ಮೂತ್ರಪಿಂಡ ದಾನ ಮಾಡಿದ್ರೆ 4 ಕೋಟಿ ರೂ ನೀಡುವುದಾಗಿ ಜಾಹೀರಾತು ಹಾಕಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಣ ಮಾಡೋಕೆ ಅಡ್ಡದಾರಿ ಹಿಡಿದಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಹೇಳಿದ್ದಾರೆ.
ಆಸ್ಪತ್ರೆಗಳ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ನೈಜೀರಿಯಾ ಪ್ರಜೆಗಳಾದ ಮಿಮಿ, ಕೋವಾ ಹಾಗೂ ಮ್ಯಾಥ್ಯೂ ಇನೊಸೆಂಟ್ ವಿಚಾರಣೆ ನಡೆಸಿದ ಹೆಬ್ಎಸ್ಆರ್ ಲೇಔಟ್ ಸಿಇಎನ್ ಪೊಲೀಸರಿಗೆ ಹಲವು ಸಂಗತಿಗಳು ತಿಳಿದಿವೆ. ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸುತ್ತಿದ್ದ ಇವರು ಸಂಪೂರ್ಣ ವಾಟ್ಸಾಪ್ ಮುಖಾಂತರವೇ ಜನರನ್ನು ವಂಚಿಸುತ್ತಿದ್ದರು. ಒಂದು ಕಿಡ್ನಿಗೆ ನಾಲ್ಕು ಕೋಟಿ ಆಫರ್ನನ್ನು ಆರೋಪಿಗಳು ಕೊಟ್ಟಿದ್ದರು. ಅವರನ್ನು ನಂಬಿದ್ದ ಜನ ಸಂಪರ್ಕಿಸಿದ್ರೆ ಮುಂಗಡವಾಗಿ ಎರಡು ಕೋಟಿ ನೀಡಬೇಕು ಎಂದು ಹೇಳುತ್ತಿದ್ದರು. ಇವರ ಮಾತು ಕೇಳಿದ ಅನೇಕ ಮಂದಿ ಹಣ ಕೊಟ್ಟು ಮೋಸಹೋಗಿದ್ದಾರೆ. ಸದ್ಯ ಇದೇ ಮಾದರಿ ಐದು ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ದಾಖಲೆ ಸೃಷ್ಟಿಸಿ, ವಂಚನೆ ಮಾಡಿರೋದು ಬಯಲಾಗಿದೆ.
ನಗರ ಪೊಲೀಸ್ ಆಯುಕ್ತರ ಫೋಟೋ ಬಳಸಿ ನಕಲಿ ದಾಖಲೆ: ಬಂಧಿತರು ನಂಬಿ ಬಂದ ಜನಕ್ಕೆ ವಂಚನೆ ಮಾಡೋಕೆ ಪ್ರತಿಷ್ಠಿತ ಆಸ್ಪತ್ರೆಗಳಷ್ಟೇ ಅಲ್ಲ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಫೋಟೋ ಸಹ ದುರ್ಬಳಕೆ ಮಾಡಿದ್ದಾರೆ. ಜೊತೆಗೆ ದೆಹಲಿ, ತಮಿಳುನಾಡು ಪೊಲೀಸರ ಫೋಟೋ ಇರುವ ಲೆಟರ್ ಮೂಲಕ ಕಿಡ್ನಿ ಡೊನೇಷನ್ಗೆ ಅಪ್ರೂವ್ ಸಿಕ್ಕದಂತೆ ಬಿಂಬಿಸಿದ್ದಾರೆ.
ಇದಷ್ಟೇ ಅಲ್ಲ, ಇನ್ನು ಎರಡೆಜ್ಜೆ ಮುಂದೆ ಹೋಗಿ ಯುಎನ್ಒನಿಂದಲೂ ಸರ್ಟಿಫಿಕೇಟ್ ಹಾಗೂ ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ನಿಂದ ಸಹ ಕಿಡ್ನಿ ಡೊನರ್ ಬಗೆಗೆ ಅನುಮತಿ ನೀಡಿರುವಂತೆ ನಕಲಿ ದಾಖಲೆ ತೋರಿಸಿ ವಂಚಿಸಿರೋದು ಪತ್ತೆಯಾಗಿದೆ. ಆರೋಪಿಗಳು ಈ ಎಲ್ಲಾ ನಕಲಿ ದಾಖಲೆಯನ್ನು ಅಮೃತಹಳ್ಳಿಯ ತಮ್ಮ ಮನೆಯಲ್ಲೇ ಕುಳಿತು ಎಡಿಟ್ ಮಾಡಿ ಕಲರ್ ಪ್ರಿಂಟ್ ಮುಖಾಂತರ ಜನರಿಗೆ ವಾಟ್ಸ್ ಆ್ಯಪ್ನಲ್ಲಿ ಕಳುಹಿಸಿ, ವಂಚಿಸುತ್ತಿದ್ದರಂತೆ.
ಇದನ್ನೂ ಓದಿ: ರಾಘವೇಂದ್ರ ಡಿ.ಚನ್ನಣ್ಣನವರ್ ವಿರುದ್ಧ ಗಂಭೀರ ಆರೋಪ: ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಮಹಿಳೆ
ನಕಲಿ ಪೊಲೀಸರೆಂದು ದೂರು: ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ಬಂದ ದೂರಿನ ಆಧಾರದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಆರೋಪಿಗಳು ಚೆಳ್ಳೆ ಹಣ್ಣು ತಿನ್ನಿಸಲು ಮುಂದಾಗಿದ್ರಂತೆ. ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ತಿರುಗಿ ಬಿದ್ದ ಓರ್ವ ಆರೋಪಿ ರೂಮಿನಲ್ಲಿ ಅವರನ್ನು ಕೂಡಿ ಹಾಕಿ ಸೆಕ್ಯೂರಿಟಿ ಮೂಲಕ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದನಂತೆ.
ಅಲ್ಲದೇ, ನಕಲಿ ಪೊಲೀಸರು ಎಂದು ದೂರು ಸಹ ನೀಡಿದ್ದನಂತೆ. ಆದ್ರೆ ಸ್ಥಳಕ್ಕೆ ಬಂದ ಪೊಲೀಸರು ಜೊತೆಗೂಡಿ ಕೊನೆಗೆ ಕಿಡ್ನಿ ಕಳ್ಳಾಟ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ. ದೆಹಲಿಯಲ್ಲಿ ಕುಳಿತ ಕಿಂಗ್ ಪಿನ್ಗಳ ಅಣತಿಯಂತೆ ಆರೋಪಿಗಳು ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಸಿಕ್ಕ ಮಾಹಿತಿ ಆಧರಿಸಿ ದೊಡ್ಡ ದೊಡ್ಡ ತಿಮಿಂಗಿಲಗಳಿಗೆ ಬಲೆ ಬೀಸಿದ್ದು, ಆ ಬಳಿಕವಷ್ಟೇ ಕಿಡ್ನಿ ಕಳ್ಳಾಟವೆಂಬ ಸಮುದ್ರದ ನಿಜವಾದ ಆಳ ಬಯಲಾಗಲಿದೆ.