ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಶಿಫಾರಸು ಮಾಡಬಾರದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಶಿಫಾರಸು ಮಾಡುವುದನ್ನ ಪ್ರಶ್ನಿಸಿ ಪೊಲೀಸ್ ಮಹಾಸಭಾದ ಅಧ್ಯಕ್ಷ ಶಶಿಧರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ವರ್ಗಾವಣೆ ಶಿಫಾರಸು ಮಾಡುವ ಜನಪ್ರತಿನಿಧಿಗಳ ಕ್ರಮ ಸರಿಯಲ್ಲ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಗೆ ಇರುತ್ತೆ ಎಂದು ಹೈಕೋರ್ಟ್ ತಿಳಿಸಿದೆ.
ಅರ್ಜಿದಾರರ ಪರ ವಕೀಲರು ವಕಾಲತ್ತು ವಹಿಸಿ ವರ್ಗಾವಣೆ ವಿಚಾರದಲ್ಲೂ ಜನಪ್ರತಿನಿಧಿಗಳು ಮೂಗು ತೂರಿಸುತ್ತಿದ್ದಾರೆ, ಶಿಫಾರಸು ಪತ್ರ ನೀಡುತ್ತಾರೆ . ತಮಗೆ ಬೇಕಾದ ಅಧಿಕಾರಿಯನ್ನು ತಮ್ಮ ಇಚ್ಚೆಯ ಠಾಣೆಗೆ/ವಿಭಾಗಕ್ಕೆ ವರ್ಗಾಯಿಸಲು ಒತ್ತಡ ಹಾಕುತ್ತಾರೆ. ಅಲ್ಲದೇ, ಕೆಲವೊಮ್ಮೆ ಅಧಿಕಾರಿಯನ್ನು ನಿರ್ದಿಷ್ಟ ಠಾಣೆ /ವಿಭಾಗದಲ್ಲಿಯೂ ಮುಂದುವರೆಸುವಂತೆ ಶಿಫಾರಸು ಮಾಡುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ಬಗ್ಗೆ ನ್ಯಾಯಾಲಯ ಜನಪ್ರತಿನಿಧಿಗಳ ಶಿಫಾರಸು ಆಧಾರಿಸಿ ಇಲ್ಲಿಯ ತನಕ ಯಾವ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಶಾಸಕರ ಶಿಫಾರಸು ಪತ್ರಗಳ ಬಗ್ಗೆ ಸರ್ಕಾರ ತೆಗೆದು ಕೊಂಡ ಕ್ರಮ ಏನು ಎಂಬುದರ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಆದೇಶಿಸಿ ಅರ್ಜಿ ವಿಚಾರಣೆಯನ್ನ ನವೆಂಬರ್ 28ಕ್ಕೆಮುಂದೂಡಿಕೆ ಮಾಡಿದೆ.