ಬೆಂಗಳೂರು: ಕೆಎಸ್ಟಿಡಿಸಿ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಬ್ಸಿಡಿ ದರದಲ್ಲಿ ಕೆಎಸ್ಟಿಡಿಸಿಯಿಂದ ಟ್ಯಾಕ್ಸಿ ನೀಡಲಾಗುತ್ತಿದೆ. ಇದು ಉಪಯೋಗಕ್ಕೆ ಬರುತ್ತಿದಿಯಾ? ಇಲ್ಲವೋ ಅಂತಾ ವರದಿ ಪಡೆಯುತ್ತೇವೆ. ಇಡೀ ಯೋಜನೆ ಸ್ವಾವಲಂಬಿ ಮಾಡಬೇಕು ಹೊರತು ಫಲಾನುಭವಿಗಳನ್ನು ಸಾಲಗಾರರನ್ನಾಗಿ ಮಾಡಬಾರದು. ಜಿಲ್ಲೆಗಳಲ್ಲಿ ಬೇಡಿಕೆಯೇ ಇಲ್ಲದೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ಕೊಡಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ಸಾಲದ ಹೊರೆ ಹೆಚ್ಚಿದೆ. 2017-18ರಲ್ಲಿ 2400ಜನರಿಗೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಇದರ ಲಾಭ ನಷ್ಟಗಳ ಬಗ್ಗೆ ಅಧ್ಯಯನ ವರದಿ ತರಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
40 ಪ್ರಮುಖ ಪ್ರವಾಸಿ ವರ್ತುಲಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಪ್ರಧಾನಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉದ್ದೇಶಿಸಿದ್ದಾರೆ. ಆ ಸಂಬಂಧ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕೇಂದ್ರ ಗುರುತು ಮಾಡಿದೆ. ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಕರ್ನಾಟಕದ ಹಂಪಿ ಕೂಡ ಇದೆ. ಸರ್ಕಾರದಿಂದ ಯಾವ ರೀತಿಯ ಅಭಿವೃದ್ಧಿ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಖಾಸಗಿ ಆಸಕ್ತರನ್ನ ಸೇರಿಸಿ ಪ್ರವಾಸೋದ್ಯಮದಲ್ಲಿ ಹೂಡಿಕೆ ಆಕರ್ಷಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.
ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲಿನ ಯೋಜನೆಯಿಂದ ಇಲಾಖೆಗೆ 41 ಕೋಟಿ ನಷ್ಟವಾಗಿದೆ. ಹಾಗಾಗಿ ಅದನ್ನು ನಿಲ್ಲಿಸಲಾಗಿದೆ. ಜಂಗಲ್ ಲಾಡ್ಜಸ್ ಮತ್ತು ಕೆಎಸ್ಟಿಡಿಸಿ ಲಾಭದಲ್ಲಿವೆ. ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ 243 ಅಧಿಕಾರಿಗಳ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡಲಾಗುತ್ತದೆ. ಎಲ್ಲರನ್ನು ತೃಪ್ತಿ ಪಡಿಸಲು ಮಾತ್ರ ಪ್ರವಾಸೋದ್ಯಮ ಇಲಾಖೆ ಅನುದಾನ ಬಳಕೆಯಾಗುತ್ತಿದೆ ಹೊರತು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ ಎಂದು ಇದೇ ವೇಳೆ ಹೇಳಿದರು.
ರಾಜ್ಯದಲ್ಲಿ 25 ಮಹಾ ಪುರುಷರ ಜಯಂತಿ ಆಚರಿಸುತ್ತಿದ್ದೇವೆ. ಇದರಲ್ಲಿ ಕೆಲವು ಜನ ಸಹಭಾಗಿತ್ವದ ಜಯಂತಿ ಇದ್ದರೆ, ಇನ್ನು ಕೆಲವು ಜನ ಸಹಭಾಗಿತ್ವ ಇಲ್ಲದ ಜಯಂತಿ ಆಗಿವೆ. ಈ ಜಯಂತಿ ಆಚರಣೆ ಬಗ್ಗೆ ಮರು ಚಿಂತನೆ ಆಗಬೇಕಿದೆ ಎಂದರು. ಜಯಂತಿಗಳ ಆಚರಣೆ ಸರಿ. ಆದರೆ ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಬಗ್ಗೆ ಮರು ಚಿಂತನೆ ಆಗಬೇಕಿದೆ. ಸಮುದಾಯದವರ ಜತೆ ಸಮಲೋಚನೆ ನಡೆಸಿ ಸ್ವರೂಪ ಬದಲಾಯಿಸಿ ಆಚರಿಸಲು ಚಿಂತನೆ ನಡೆಸಿದ್ದೇವೆ ಎಂದು ವಿವರಿಸಿದರು.
ಕಲಾವಿದರಿಗೆ ಕೊಡುವ ಮಾಶಾಸನ ಮುಂದುವರಿಸುತ್ತೇವೆ. ಆದರೆ ಸಂಘ-ಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ಬಜೆಟ್ ಪ್ರಾವಿಷನ್ ಮಾಡಿಕೊಂಡಿಲ್ಲ. ಈ ಬಗ್ಗೆ ಮರು ಪರಿಶೀಲಿಸಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು