ಬೆಂಗಳೂರು: ಪದೇ ಪದೆ ಬಸ್‌ಗಳಲ್ಲಿ ಬೆಂಕಿ ಹತ್ತಿಕೊಳ್ಳುತ್ತಿರುವ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ, ಆಶೋಕ್ ಲೈಲ್ಯಾಂಡ್ ಕಂಪನಿಯ 186 ಬಸ್‌ಗಳ ಸಂಚಾರ ನಿಲ್ಲಿಸಿದೆ. ಕಳೆದ ಕೆಲವು ತಿಂಗಳಿನಲ್ಲಿ ಮೂರು ಬಿಎಂಟಿಸಿ ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ಕಳೆದ ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿ ಒಂದು ಬಸ್ ಬೆಂಕಿಗೆ ಆಹುತಿಯಾಗಿತ್ತು. ಫೆಬ್ರವರಿ 1 ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಪ್ರಯಾಣಿಕರಿದ್ದ ಸಂದರ್ಭದಲ್ಲೇ ಬಸ್ಗೆ ಬೆಂಕಿ ಹತ್ತಿಕೊಂಡಿತ್ತು.
ಒಂದೇ ಬ್ಯಾಚ್‌ನಲ್ಲಿ ಖರೀದಿಸಿದ್ದ ಬಸ್‌ಗಳಲ್ಲಿ ಬೆಂಕಿ: ಒಂದೇ ಬ್ಯಾಚ್‌ನಲ್ಲಿ ಖರೀದಿಸಿದ್ದ ಲೈಲ್ಯಾಂಡ್ ಸಂಸ್ಥೆಯ ಬಸ್‌ಗಳಲ್ಲಿ ಬೆಂಕಿ ಹತ್ತಿಕೊಳ್ಳುತ್ತಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ವೆಂಕಟೇಶ್ ವಿವರಿಸಿದ್ದಾರೆ.
ಇದನ್ನೂ ಓದಿ: ನಾಳೆ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ: ಸಿಎಂ ಬೊಮ್ಮಾಯಿ
ತಜ್ಞರಿಂದ ಗ್ರೀನ್ ಸಿಗ್ನಲ್: ತಜ್ಞರು ಬಿಎಂಟಿಸಿ ಘಟಕಕ್ಕೆ ಭೇಟಿ ನೀಡಿ ಲೋಪದೋಷ ಸರಿಪಡಿಸಿ ಎಲ್ಲ ಸರಿಯಿದೆ ಎಂದು ತಿಳಿಸಿ ತೆರಳಿದ್ದರು. ಆದರೆ, ಒಂದು ತಿಂಗಳೊಳಗೆ ಅಂದರೆ ಏಪ್ರಿಲ್ 9ರಂದು ಶೇಷಾದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಬಸ್ ಬೆಂಕಿಗೆ ಆಹುತಿಯಾಗಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಳದಿಂದ ಕೂಡ ಈ ರೀತಿಯಾಗುತ್ತಿರಬಹುದು ಎಂದರು.
ಡಿಪೋಗಳಿಗೆ ಮಾಹಿತಿ ರವಾನೆ: ಆಶೋಕ್ ಲೈಲ್ಯಾಂಡ್ ಬಸ್ ಸಂಚಾರ ರದ್ದುಗೊಳಿಸಿರುವ ಕುರಿತು ಎಲ್ಲ ಡಿಪೋಗಳಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಬಸ್ ಸಂಚಾರ ನಡೆಸಿ ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.