ಬೆಂಗಳೂರು: ಕೊರೊನಾ ಹಾವಳಿ ತಡೆಗಟ್ಟಲು ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಊಟೋಪಹಾರ ನೀಡಲು ಆರಂಭಿಸಿದ ಸರ್ಕಾರ, ಜನದಟ್ಟಣೆ ನೋಡಿ ಮಂಗಳವಾರವೇ ಸ್ಥಗಿತಗೊಳಿಸಿತ್ತು. ಆದ್ರೆ, ಮತ್ತೆ ಇಂದು ಇಂದಿರಾ ಕ್ಯಾಂಟೀನ್ ತೆರಯಲು ಸರ್ಕಾರ ನಿರ್ಧರಿಸಿದೆ.
ಗುರುವಾರ ಮುಂಜಾನೆಯಿಂದಲೇ ಆಹಾರ ನೀಡಲು ಗುತ್ತಿಗೆದಾರರಿಗೆ ಸರ್ಕಾರ ತಿಳಿಸಿದೆ. ಇಂದು ಎಲ್ಲಾ ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಾಗುವುದಿಲ್ಲ. ಬದಲಾಗಿ ಅತ್ಯಗತ್ಯ ಇರುವೆಡೆ ಮಾತ್ರ ಆಹಾರ ಪೂರೈಕೆ ನಡೆಯಲಿದೆ.
ಈವರೆಗೆ 60 ಸಾವಿರ ಜನರಿಗೆ ಊಟ ಸಿದ್ಧಪಡಿಸುತ್ತಿದ್ದು, ಗುರುವಾರದಿಂದ 11 ಸಾವಿರ ಜನರಿಗೆ ಊಟ ನೀಡಲು ಅನುಮತಿಸಲಾಗಿದೆ ಎಂದು ಗುತ್ತಿಗೆದಾರ ಗೋವಿಂದ್ ಪೂಜಾರಿ ಈಟಿವಿ ಭಾರತ್ಗೆ ತಿಳಿಸಿದರು.
ಸಾವಿರ ಪ್ಲೇಟ್ ರೈಸ್ ಬಾತ್ ಹಾಗೂ ಪುಲಾವ್ ಪೂರೈಕೆಗೆ ನಿರ್ಧರಿಸಲಾಗಿದ್ದು, ಬೆಂಗಳೂರಿನ 33 ವಾರ್ಡುಗಳಲ್ಲಿ ತಲಾ 200 ಪ್ಯಾಕೆಟ್ ಆಹಾರ ವಿತರಣೆ ಮಾಡಲಾಗುತ್ತದೆ. ಆದ್ರೆ, ಜನದಟ್ಟಣೆ ಆಗದಂತೆ, ಜನರು ಗುಂಪುಗೂಡದಂತೆ ವೇಗವಾಗಿ ಊಟ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.