ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ಹತಾಶ ಮನೋಭಾವ ಇದೆ. ಈ ರೀತಿಯ ಹೇಳಿಕೆಗಳಿಂದ ಸರ್ಕಾರದ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತದೆ. ಈಗ ನಡೆಯುತ್ತಿರುವ ಘಟನಾವಳಿಗಳು ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ. ಹೀಗಾಗಿ, ಹತಾಶೆಗೊಳಗಾಗಿ ಏನೇನೊ ಮಾತನಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಟಾಂಗ್ ನೀಡಿದರು.
ದೆಹಲಿಯಿಂದ ಲ್ಯಾಂಡ್ ಆದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ನಗರದ ರೇಸ್ ಕೋರ್ಸ್ ರಸ್ತೆಯ ಶಕ್ತಿಭಾವನದಲ್ಲಿ ಡಿಕೆಶಿ ಶಾಲು ಹಂಚಿಕೆ ಆರೋಪದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಶಿಕ್ಷಣದ ವಿಚಾರದಲ್ಲಿ ಕೇಸರಿಕರಣ ಮಾಡಿಲ್ಲ, ಕೇರಳ ಹಾಗೂ ಬಾಂಬೆ ಕೋರ್ಟ್ ಹೇಗೆ ಹೇಳಿದೆ ಅದೇ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುವುದು ನಮ್ಮ ಸರ್ಕಾರದ ಭವನೆ. ಡಿ. ಕೆ ಶಿವಕುಮಾರ್ ಮಾತನಾಡುವುದು ಕೇಸರಿ ಪರವಾಗಿಯೋ ಅಥವಾ ಹಿಜಾಬ್ ಪರವಾಗಿಯೋ ಎನ್ನುವುದು ಸ್ಪಷ್ಟವಾಗುತ್ತಿದೆ.
ಕೇಸರಿಯ ಕುರಿತು ಮಾತಾಡುವುದಕ್ಕೆ ಕಾಂಗ್ರೆಸ್ ನವರಿಗೆ ಏನ್ ಹಕ್ಕಿದೆ?. ಕೇಸರಿ ಶಾಲು ಸಾವಿರ ಅಲ್ಲ ಲಕ್ಷ ಖರೀದಿ ಮಾಡುತ್ತೇವೆ?. ಖರೀದಿ ಮಾಡಲು ನಿನ್ನನು ಕೇಳಬೇಕಾ? ಎಂದು ಏಕ ವಚನದಲ್ಲಿ ಡಿಕೆ ಶಿವಕುಮಾರ್ಗೆ ಪ್ರಶ್ನಿಸಿದರು.
ನಾವು ಮುಸ್ಲಿಂ ವಿರೋಧಿ ಅಲ್ಲವೇ ಅಲ್ಲ. ಕಾಂಗ್ರೆಸ್ ನಾಯಕರು ಪ್ರಚೋದನೆ ಕೊಡುತ್ತಿದ್ದಾರೆ. ಶಿಕ್ಷಣ ಪ್ರತಿಯೊಂದು ಮಕ್ಕಳ ಹಕ್ಕು, ಹಿಜಾಬ್ ಧರಿಸುವ ಬದಲು ಸಮವಸ್ತ್ರ ಧರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಂಗ್ರೆಸ್ ಮುಖಂಡರು ಪ್ರಚೋದನೆ ಮಾಡುತ್ತಿದ್ದಾರೆ. ಸಮವಸ್ತ್ರ ಎಲ್ಲ ಕಾಲದಲ್ಲೂ ಇದೆ. ಕೇಸರಿ ಬಟ್ಟೆ ಶಾಂತಿಯ ಸಂದೇಶ ಕೇಸರಿ ವಿರೋಧ ಮಾಡಿದರೆ ಚುನಾವಣೆ ಬಂದಾಗ ಕಾಂಗ್ರೆಸ್ಗೆ ಗೊತ್ತಾಗುತ್ತದೆ. ಕೆಲ ಭಯೋತ್ಪಾದಕ ಸಂಘಟನೆಗಳು ತಪ್ಪಾಗಿ ಈ ವಿಚಾರವನ್ನು ಪ್ರಚಾರಪಡಿಸುತ್ತಿವೆ.
ಶಾಲೆಯಲ್ಲಿ ಮಾತ್ರ ಕೇಸರಿ ಹಾಗೂ ಹಿಜಾಬ್ ಧರಿಸಬಾರದು ಎಂದು ಹೇಳಿದರು. ನಾವು ಕೋಮುವಾದಿಗಳಲ್ಲ. ನಮ್ಮ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನ್ಯಾಯಾಂಗದ ಬಗ್ಗೆ ಮಾತಾಡಲ್ಲ. ಶಿಕ್ಷಣದಲ್ಲಿ ಧರ್ಮ ಹಾಗೂ ರಾಜಕಾರಣ ಮಿಶ್ರಣ ಆಗಬಾರದು ಎಂದರು.
ಸಚಿವ ಸ್ಥಾನ ಸಿಗುವ ವಿಚಾರವಾಗಿ ರೇಣುಕಾಚಾರ್ಯ ಮಾತನಾಡಿ, ನಾನು ಜ್ಯೋತಿಷಿ ಅಲ್ಲ. ರಾಷ್ಟ್ರೀಯ ನಾಯಕರು ಹಾಗೂ ಸಿಎಂ ಈ ಕುರಿತು ತೀರ್ಮಾನ ಮಾಡ್ತಾರೆ. ದೂರು ಎಲ್ಲಿ ಹೇಳಬೇಕೊ ಅಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ರೇಣುಕಾಚಾರ್ಯ: ಬಿಕಿನಿ ಅಥವಾ ಹಿಜಾಬ್ ಧರಿಸುವುದು ಮಹಿಳೆಯರ ಹಕ್ಕು ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಮಸ್ತ ಮಹಿಳಾ ಸಮುದಾಯದ ಕ್ಷಮೆ ಕೋರಬೇಕು ಎಂದು ಕೋರಿದರು.
ಬುಧವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಧರಿಸುವ ಬಟ್ಟೆಯ ಕುರಿತು ಹೇಳಿಕೆ ನೀಡುವ ಭರದಲ್ಲಿ ಪ್ರಿಯಾಂಕಾ ಅವರು ಬಿಕನಿ ಧರಿಸುವುದೂ ಹಕ್ಕು ಎಂಬ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದಿದ್ದರು.
ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಮಹಿಳೆಯರು ಬಿಕನಿ ಧರಿಸಲಿ ಎಂದಿರುವುದು ಅತ್ಯಂತ ಕೀಳುಮಟ್ಟದ ಹೇಳಿಕೆ. ಯಾಕೆಂದರೆ ಮಹಿಳೆಯರು ಧರಿಸುವ ಉಡುಪುಗಳನ್ನು ನೋಡಿ ಪುರುಷರು ಉದ್ರೇಕಗೊಳ್ಳುತ್ತಾರೆ. ಅದರಿಂದ ಅತ್ಯಾಚಾರ ಪ್ರಕರಣಗಳೂ ಹೆಚ್ಚಲು ಕಾರಣವಾಗಿದೆ. ಇಂಥ ಹೇಳಿಕೆ ನೀಡಿದ್ದು ಒಳ್ಳೆಯದಲ್ಲ. ಬಿಕನಿ ಅನ್ನೋ ಕೀಳು ಮಟ್ಟದ ಶಬ್ದ ಬಳಸಿರುವ ಪ್ರಿಯಾಂಕಾ ಆ ಹೇಳಿಕೆ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದ್ದರು.
ಮಹಿಳೆಯರು ವಿದ್ಯಾರ್ಥಿನಿಯರ ಮೇಲಿನ ಗೌರವದಿಂದಲೇ ಒತ್ತಾಯ: ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲಿನ ಗೌರವದಿಂದಲೇ ನಾನು ಈ ಒತ್ತಾಯ ಮಾಡುತ್ತಿದ್ದೇನೆ. ಸೀರೆ ಉಟ್ಟು, ಮೂಗುಬೊಟ್ಟು ತೊಟ್ಟು, ಕುಂಕುಮ ಧರಿಸುವುದು ನಮ್ಮ ಸಂಸ್ಕೃತಿ, ಅದನ್ನು ಬಿಡುವುದರಿಂದಲೇ ಅನಾಹುತ ಆಗುತ್ತದೆ. ಹಾಗಾಗಿ, ಬಿಕಿನಿ ಹಾಕುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಕೂಡಲೇ ಕ್ಷಮೆ ಕೋರಬೇಕು ಎಂದು ಸ್ಪಷ್ಟಪಡಿಸಿದರು.
ಪ್ರಿಯಾಂಕಾ ತಾಯಿಯದ್ದು ಇಟಲಿ ಸಂಸ್ಕೃತಿ: ನಮ್ಮ ದೇಶದಲ್ಲಿ ಮಹಿಳೆಯರ ಬಗ್ಗೆ ವಿಶೇಷ ಗೌರವ ಇದೆ. ಅವರಿಗೆ ತಾಯಿ ಸ್ಥಾನ ಇದೆ. ಪ್ರಿಯಾಂಕಾ ಅವರಿಗೆ ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆ ಅರ್ಥವಾಗಿಲ್ಲ. ಹೇಳಿ ಕೇಳಿ ಪ್ರಿಯಾಂಕಾ ತಾಯಿಯದ್ದು ಇಟಲಿ ಸಂಸ್ಕೃತಿ. ಅವರು ಮದುವೆ ಆಗಿದ್ದು ವೈಯಕ್ತಿಕ. ಈ ರೀತಿ ಹೇಳುತ್ತ ಹೋದರೆ ಸಾಕಷ್ಟು ಅರ್ಥ ಬರುತ್ತದೆ. ಹಾಗಾಗಿ, ಅದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ವರ್ಚಸ್ಸು ಕಡಿಮೆ ಮಾಡುವ ಉದ್ದೇಶ: ರಾಜ್ಯದ ಕಾನೂನು ಸುವ್ಯವಸ್ಥೆ ಹಾಳುಗೆಡವಿ, ಸರ್ಕಾರದ ವರ್ಚಸ್ಸು ಕಡಿಮೆ ಮಾಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ, ದೇಶ ವಿರೋಧಿ ಚಟುವಟಿಕೆ ನಡೆಸುವವರು ಕುಂದಾಪುರದ ಒಂದು ಕಾಲೇಜಿನಲ್ಲಿ ನಡೆದಿದ್ದ ಹಿಜಾಬ್ ಘಟನೆಯನ್ನು ರಾಜ್ಯವ್ಯಾಪಿ ಹಬ್ಬಿಸುತ್ತಿವೆ ಎಂದು ದೂರಿದ್ದರು.
ಕಾಂಗ್ರೆಸ್ ಪಕ್ಷ ಶಾಂತಿ ಕದಡುತ್ತಿದೆ: ಕೇಸರಿ ಶಾಂತಿಯ ಸಂಕೇತ ಆದರೂ ಇಂಥ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಶಾಂತಿ ಕದಡುತ್ತಿದೆ. ಈ ವಿವಾದ ಹೆಚ್ಚಲು ಕಾರಣವಾದ ಎಸ್ ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡುವೆ ಎಂದು ತಿಳಿಸಿದ್ದರು.
ಓಲೈಸುವ ರಾಜಕಾರಣ: ದಲಿತರನ್ನು, ಹಿಂದುಳಿದವರನ್ನು ಓಲೈಸುವ ರಾಜಕಾರಣ ಮಾಡಿದ್ದರಿಂದ ಕಾಂಗ್ರೆಸ್ ನಿಂದ ಅವರೆಲ್ಲ ದೂರವಾಗಿದ್ದಾರೆ. ಇದೀಗ ಅಲ್ಪಸಂಖ್ಯಾತರೂ ಅವರನ್ನು ದೂರ ಮಾಡಲಿದ್ದಾರೆ ಎಂದು ಹೇಳಿದ್ದರು.
ಇಲ್ಲಿರುವ ಮುಸ್ಲಿಮರು ಒರಿಜಿನಲ್ ಮುಸ್ಲಿಮರಲ್ಲ: ದೇಶದ್ರೋಹದ ಹೇಳಿಕೆ ನೀಡುವವರನ್ನು ಪಾಕಿಸ್ತಾನಕ್ಕೆ ತೆರಳುವಂತೆ ಕೆಲವರು ಆಗ್ರಹಿಸಿದ್ದಾರೆ. ಇಲ್ಲಿರುವ ಮುಸ್ಲಿಮರು ಒರಿಜಿನಲ್ ಮುಸ್ಲಿಮರಲ್ಲ. ನಮ್ಮ ದೇಶದ ಗಾಳಿ, ನೀರು ಸೇವಿಸಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಕೆಲವರನ್ನು ಪಾಕಿಸ್ತಾನದವರೂ ನಂಬುವುದಿಲ್ಲ. ಅವರು ಪಾಕ್ ಪರ ಮಾತನಾಡುವುದರಿಂದ ಅನಿವಾರ್ಯವಾಗಿ ಅಲ್ಲಿಗೆ ಹೋಗಿ ಎಂದು ಹೇಳಲಾಗುತ್ತದೆ. ಅಲ್ಲಿಗೆ ಹೋಗಿ ಅನ್ನೋ ಬದಲು ಬೇರೆ ಎಲ್ಲಿಗೆ ಹೋಗಿ ಎಂದು ಹೇಳಕ್ಕಾಗತ್ತೆ? ಎಂದು ಪ್ರಶ್ನಿಸಿದ್ದರು.
ಶಿಕ್ಷಣದಲ್ಲಿ ಕೇಸರಿಕರಣ ಮಾಡುವುದಿಲ್ಲ: ನಮ್ಮ ಮಕ್ಕಳ ನಡುವೆ ವಿಷಬೀಜ ಬಿತ್ತುವ ಕಾಂಗ್ರೆಸ್ ನವರು, ಬಿಜೆಪಿಯವರು ಕೇಸರೀಕರಣ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ನಾವು ರಾಜಕಾರಣದಲ್ಲಿ ಕೇಸರೀಕರಣ ಮಾಡುತ್ತೇವೆ ನಿಜ. ಶಿಕ್ಷಣದಲ್ಲಿ ಮಾಡುವುದಿಲ್ಲ ಎಂದು ರೇಣುಕಾಚಾರ್ಯ ನುಡಿದಿದ್ದರು.
ಹೈಕೋರ್ಟ್ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಭಾರತ ಮಾತೆಯ ಮಕ್ಕಳು. ಸಮಾನತೆ ಬೇಕು. ಹಾಗಾಗಿ, ಶಾಲೆ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವಂತೆ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಮನವಿ ಮಾಡಿದ್ದರು.
ಹೇಳಿಕೆಯಿಂದ ನೋವಾದಲ್ಲಿ ಕ್ಷಮೆ: ಅತ್ಯಾಚಾರ ಪ್ರಕರಣಗಳು ಹೆಚ್ಚಲು ಮಹಿಳೆಯರ ಉಡುಪೇ ಕಾರಣ ಎಂಬ ಹೇಳಿದ್ದು ದುರುದ್ದೇಶದಿಂದ ಅಲ್ಲ. ಈ ಹೇಳಿಕೆಯಿಂದ ಮಹಿಳೆಯರಿಗೆ ನೋವಾದಲ್ಲಿ ಕ್ಷಮೆ ಕೋರುವೆ' ಎಂದು ಸ್ಪಷ್ಟಪಡಿಸಿದ್ದರು.
ಓದಿ: ರಾಜ್ಯದಲ್ಲಿಂದು 5,339 ಮಂದಿಗೆ ಕೋವಿಡ್.. 48 ಸೋಂಕಿತರ ಸಾವು