ಬೆಂಗಳೂರು : ಕಾಂಗ್ರೆಸ್‌ನವರು ತಾಲಿಬಾನಿ ಸಂಸ್ಕೃತಿಯವರು. ಕೊಳ್ಳಿ ಇಡುವ ಸಂಸ್ಕೃತಿಯವರು. ನಾವು ಸುಸಂಸ್ಕೃತರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ವಿರುದ್ಧ ಹೆಚ್‌ಡಿಕೆ, ಸಿದ್ದರಾಮಯ್ಯ ಹಾಗೂ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಂಘಪರಿವಾರದ ವಿರುದ್ಧ ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ. ತಾಲಿಬಾನ್ ಸಂಸ್ಕೃತಿ ಆರ್ಎಸ್ಎಸ್ನದ್ದಲ್ಲ.
ಆ ಸಂಸ್ಕೃತಿ ಕಾಂಗ್ರೆಸ್‌ನವರದ್ದಾಗಿದೆ. ಕೊಳ್ಳಿಯಿಡುವ ಸಂಸ್ಕೃತಿ ಅವರದ್ದಾಗಿದೆ. ವಿಕೃತ ಮನಸ್ಸಿನವರು ನೀವು. ವೋಟಿಗಾಗಿ ರಾಜಕಾರಣ ಮಾಡಬೇಡಿ. ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ ನಿಮಗೇ ನಷ್ಟ ಎಂದು ಕಿಡಿ ಕಾರಿದರು.
ಸಂಘ ಪರಿವಾರದ ನಾಯಕರಿಗೆ ಕುರ್ಚಿ ವ್ಯಾಮೋಹ ಇಲ್ಲ. ದೇಶಕ್ಕಾಗಿ ತ್ಯಾಗ ಮಾಡುವ ಸಂಸ್ಥೆ ಆರ್ಎಸ್ಎಸ್. ಕುರ್ಚಿ ವ್ಯಾಮೋಹ ಇರೋದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಇಂಥ ಹೇಳಿಕೆ ಕೊಡ್ತಿದ್ದಾರೆ. ಇವರ ನಾಟಕ ಅಲ್ಪಸಂಖ್ಯಾತರಿಗೂ ಗೊತ್ತಾಗಿ ಹೋಗಿದೆ.
ಉಪಚುನಾವಣೆ ಬಂದಿರೋ ಹಿನ್ನೆಲೆ ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಿದ್ದಾರೆ. ಆರ್ಎಸ್ಎಸ್ ವಿರುದ್ಧ ಮಾತಾಡಿದರೆ, ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಕಾಂಗ್ರೆಸ್ ಎರಡು ಚುನಾವಣೆಗಳಲ್ಲೂ ಧೂಳೀಪಟ ಆಗುತ್ತದೆ. ಸಂಘಟನೆ ಬಗ್ಗೆ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ದರ ಏರಿಕೆಗೆ ರೇಣುಕಾಚಾರ್ಯ ಸಮರ್ಥನೆ
ಒಂದು ಕಾಲದಲ್ಲಿ ಹತ್ತು ರೂ. ವೇತನ ಇತ್ತು. ಈಗ ವೇತನ 1000 ರೂ. ಮಟ್ಟಕ್ಕೆ ಏರಿದೆ. ಕೃಷಿ ಕೂಲಿ ಕಾರ್ಮಿಕರ ವೇತನ ನಿತ್ಯ 500 ರೂ. ಗೆ ಏರಿದೆ. ಇದು ಸಹಜ ಪ್ರಕ್ರಿಯೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಹಿಂದುತ್ವ, ಸಮಾಜ, ದೇಶ ಸೇವೆ ಮಾಡುವ ಸಂಸ್ಥೆ ಆರ್ಎಸ್ಎಸ್. ಇದಕ್ಕೆ ಅರ್ಪಣಾ ಮನೋಭಾವ ಇದೆ.
ಎಲ್ಲರನ್ನೂ ಮಾರ್ಗದರ್ಶನ ಮಾಡುವ ಸಂಸ್ಥೆ ಅದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಾಗಿದೆ. ಬೆಲೆ ಏರಿಕೆ ಸಹಜ. ಉತ್ಪಾದಕರಿಂದಲೂ ದರ ಏರಿಕೆ ಆಗಿದೆ. ಸಹಜವಾಗಿ ತೈಲ ದರದ ಜತೆಗೆ ಉತ್ಪನ್ನಗಳ ಮಾರುಕಟ್ಟೆ ದರ ಹೆಚ್ಚಾಗುತ್ತದೆ. ಪ್ರಧಾನಿಗಳು ತೈಲ ದರದ ಆದಾಯ ಮನೆಗೆ ಕೊಂಡೊಯ್ಯಲ್ಲ. ಆ ಹಣದಿಂದ ದೇಶ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಶಾಸಕರ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಸಂಸ್ಕೃತಿ ಜೆಡಿಎಸ್ ಆರಂಭ ಮಾಡಿದ್ದು. ಕಾಂಗ್ರೆಸ್, ಜೆಡಿಎಸ್‌ನವರು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಬಿಜೆಪಿಗೆ ಬಂದರು. ಅವರಾಗಿಯೇ ಬಂದರು ಎಂದು ತಿಳಿಸಿದರು.
ಐಟಿ ದಾಳಿಗೂ ಬಿಎಸ್ವೈಗೂ ತಳುಕು ಹಾಕಬೇಡಿ
ಯಡಿಯೂರಪ್ಪ ಕಂಟ್ರೋಲ್ ಮಾಡಲು ಉಮೇಶ್ ಮೇಲೆ ಐಟಿ ದಾಳಿ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಡಿಯೂರಪ್ಪಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ಬಿಎಸ್ವೈ ಅವರನ್ನು ಹದ್ದುಬಸ್ತಿನಲ್ಲಿಡಲು ದಾಳಿ ಆಗಿದೆ ಅನ್ನೋದು ಸುಳ್ಳು. ದಾಳಿಗೂ ಚುನಾವಣೆಗೂ ಸಂಬಂಧ ಇಲ್ಲ ಅಂತಾ ಅವರೇ ಹೇಳಿದ್ದಾರೆ ಎಂದರು.
ಐಟಿ ದಾಳಿಗೂ ಯಡಿಯೂರಪ್ಪ, ವಿಜಯೇಂದ್ರಗೂ ತಳುಕು ಹಾಕುವುದು ಸರಿಯಲ್ಲ. ಬಿಎಸ್ವೈ ಬಗ್ಗೆ ಪಕ್ಷಕ್ಕೆ ಅಪಾರ ಗೌರವ, ಅಭಿಮಾನ ಇದೆ. ಯಡಿಯೂರಪ್ಪ ಅವರನ್ನು ಪಕ್ಷ ಸೈಡ್ಲೈನ್ ಮಾಡಿಲ್ಲ. ಉಮೇಶ್ ಅವರು ಯಡಿಯೂರಪ್ಪ ಆಪ್ತ ಆಗಿದ್ದರೆ ಯಡಿಯೂರಪ್ಪ ಅವರ ತಪ್ಪೇನು?. ನಾನೇನಾದ್ರೂ ತಪ್ಪು ಮಾಡಿದ್ರೆ ಬಿಎಸ್ವೈಗೆ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಯುಪಿಯ ಲಖೀಂಪುರ ಹಿಂಸಾಚಾರ ವಿಚಾರದಲ್ಲಿ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಪಘಾತ ಮಾಡುವ ಸಂಸ್ಕೃತಿ ಅವರದ್ದು. ಅವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ನಮ್ಮದು. ಇದು ಜೆಡಿಎಸ್-ಕಾಂಗ್ರೆಸ್ ಸಂಸ್ಕೃತಿ. ಒಂದು ರೀತಿ ತಾಲಿಬಾನ್ ಸಂಸ್ಕೃತಿ ಅವರದ್ದು. ಅಲ್ಲಿ ಏನ್ ಆಗಿದೆಯೋ ಸತ್ಯವಾಗಿಯೂ ನನಗೆ ಗೊತ್ತಿಲ್ಲ.
ಕಾಂಗ್ರೆಸ್‌ನವರು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಡಿಕೆಶಿ ಅನಗತ್ಯವಾಗಿ ಹೇಳಿಕೆ ಕೊಡೋದು ಸರಿಯಲ್ಲ. ಕಾಂಗ್ರೆಸ್, ಜೆಡಿಎಸ್‌ನವರ ಹೇಳಿಕೆ ಸರಿಯಲ್ಲ. ಅಂಥ ಹೇಳಿಕೆಗಳಿಂದಾಗಿ ಜನ ಕಾಂಗ್ರೆಸ್ ಅನ್ನು ದೂರ ಇಟ್ಟಿದ್ದಾರೆ ಎಂದು ಟೀಕಿಸಿದರು.