ಬೆಂಗಳೂರು: ಏಪ್ರಿಲ್ 14ರಂದು ನಡೆಯುವ ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧವಿಲ್ಲದೆ ಕೊರೊನಾ ಮಾರ್ಗದರ್ಶಿ ಸುತ್ತೋಲೆ ಹೊರಡಿಸಬೇಕು ಎಂದು ಸಂವಿಧಾನ ಸಂರಕ್ಷಣಾ ಐಕ್ಯ ಹೋರಾಟ ಸಮಿತಿ ಸದಸ್ಯರು ಹಾಗೂ ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮೈಸೂರು ಉರಿಲಿಂಗ ಪೆದ್ದಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಕೊರೊನಾ ನಿಯಮಗಳನ್ನು ಹೇರಿ ಅಂಬೇಡ್ಕರ್ ಜಯಂತಿಗೆ ಅಡ್ಡಿ ಪಡಿಸುತ್ತಿದೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಅಂಬೇಡ್ಕರ್ ಜಯಂತಿಗೆ ಕೊರಾನಾ ನೆಪದಲ್ಲಿ ತೊಂದರೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಸಮತಾ ಪಕ್ಷದ ಮುಖಂಡ ಎಂ. ವೆಂಕಟಸ್ವಾಮಿ ಮಾತನಾಡಿ, ಜಗತ್ತಿನ ಎಲ್ಲಾ ದೇಶಗಳಲ್ಲಿ ಭಾವಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರ, ಕರಗ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ. ಆದರೆ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಕೊರಾನಾ ನೆಪದಲ್ಲಿ ಅಡ್ಡಿಪಡಿಸುವುದು ಸಂವಿಧಾನ ವಿರೋಧಿ ಕೃತ್ಯ. ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು ಖುದ್ದಾಗಿ ವಿಧಾನ ಸೌಧದ ಮುಂಭಾಗದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆ ಬಳಿ ಆಗಮಿಸಿ ಅದ್ದೂರಿ ಜಯಂತಿ ಆಚರಣೆಗೆ ಅವಕಾಶ ನೀಡಬೇಕೆಂದು ಹೇಳಿದರು.
ಇದನ್ನೂ ಓದಿ: ಸೋಫಿಯಾನದಲ್ಲಿ ಭದ್ರತಾ ಪಡೆ ಗುಂಡಿಗೆ ಮೂವರು ಉಗ್ರರು ಬಲಿ: ಜೆಇಎಂ ಉಗ್ರನ ಸೆರೆ
ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಆರ್. ಎಂ.ಎನ್. ರಮೇಶ್ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ರಾಜ್ಯ ಸರ್ಕಾರ ಅದ್ದೂರಿಯಾಗಿ ಆಚರಣೆಗೆ ಅವಕಾಶ ಕೊಡುವ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕು. ಮುಕ್ತವಾಗಿ ಜಯಂತಿ ನಡೆಸಲು ಅವಕಾಶ ನೀಡಬೇಕು. ಮುಕ್ತ ಆಚರಣೆಗೆ ಅವಕಾಶ ನೀಡದಿದ್ದರೇ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಿಂತಕ, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಕೆ.ಗೋಪಾಲ್, ಮಹಿಳಾ ದಲಿತ ಒಕ್ಕೂಟದ ಅಧ್ಯಕ್ಷೆ ಅನುಸೂಯಮ್ಮ ಸೇರಿದಂತೆ ಇತರರು ಹಾಜರಿದ್ದರು.