ಬೆಂಗಳೂರು: ಪಾವಗಡ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪ್ರವೇಶ ನಿರಾಕರಿಸಿರುವುದನ್ನು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಖಂಡಿಸಿದ್ದಾರೆ. ಅಲ್ಲದೆ, ಈ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಘಟನೆ ಯಾಕೆ ನಡೀತು ಅನ್ನುವ ಬಗ್ಗೆ ತನಿಖೆಯಾಗಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾರಾಯಣಸ್ವಾಮಿ ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಆ ಗ್ರಾಮಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.
ನಾವೆಲ್ಲರೂ ಮೊದಲು ಮನುಷ್ಯ ಜಾತಿ. ನಮ್ಮೆಲ್ಲರ ದೇಹದಲ್ಲಿರುವುದು ರಕ್ತ ಕೆಂಪು ಬಣ್ಣದ್ದೇ ಆಗಿದೆ. ಸಂವಿಧಾನದಲ್ಲಿ ಅಸ್ಪೃಶ್ಯತೆ ಇರಬಾರದು ಎಂದು ಹೇಳಲಾಗಿದೆ. ಆದರೆ ಇಂದಿಗೂ ಅದು ಆಚರಣೆಯಲ್ಲಿರುವುದು ವಿಷಾದದ ಸಂಗತಿ ಎಂದು ಘಟನೆಯನ್ನು ಉಗ್ರಪ್ಪ ಖಂಡಿಸಿದ್ದಾರೆ.