ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ. ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ ಕಡಿಮೆ ಮಾಡಿರುವುದು ರಾಜ್ಯ ಸರ್ಕಾರದ ತಪ್ಪು ನಿರ್ಧಾರ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಉಪಚುನಾವಣೆ ಕುರಿತು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡುವ ವೇಳೆ ಮಾಸ್ಕ್ ದಂಡದ ಪ್ರಮಾಣ 1000 ರೂಗಳಿಂದ 250ಕ್ಕೆ ಹಾಗೂ 500 ರೂಪಾಯಿಯಿಂದ 100 ರೂ.ಗಳಿಗೆ ಇಳಿಸಿರುವುದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟರು.

ಕೊರೊನಾದಿಂದ ರಕ್ಷಿಸಿಕೊಳ್ಳಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. ಮಾಸ್ಕ್ ಧರಿಸುವುದರಿಂದ ನಮಗೂ ಕೊರೊನಾ ಬರುವುದನ್ಬ ತಡೆಗಟ್ಟಬಹುದು ಹಾಗೂ ನಮ್ಮಿಂದ ಬೇರೆಯವರಿಗೆ ಹರಡುವುದನ್ನೂ ಸಹ ತಡೆಯಬಹುದೆಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಸ್ಕ ಧರಿಸುತ್ತಿದ್ದಿಲ್ಲ ಅವರಿಗೆ ಕೊರೊನಾ ಬಂತು. ಅವರ ಸಹೋದರ ಡಿ.ಕೆ. ಸುರೇಶ್ಗೆ ಕೊರೊನಾ ತಗುಲಿತು. ಕೊರೊನಾದಿಂದ ಕಲ್ಲುಗುಂಡಿನಂತೆ ಇದ್ದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಅಸುನೀಗಬೇಕಾಯಿತು ಎಂದು ಕೊರೊನಾ ಬಂದು ತೊಂದರೆ ಅನುಭವಿಸಿದ ಗಣ್ಯರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿ ಮಾಸ್ಕ್ ಧರಿಸುವಂತೆ ತಿಳಿಹೇಳಿದರು.