ಬೆಂಗಳೂರು: ನೇಮಕಾತಿ ಆದೇಶ ಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಉಪನ್ಯಾಸಕ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದ್ದೆ. ಅದನ್ನು ಈಗ ಈಡೇರಿಸಿದ್ದೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
2014ರಲ್ಲಿ ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿಗಾಗಿ 1,203 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಆದರೆ 2019ರವರೆಗೂ ಈ ಉಪನ್ಯಾಸಕ ಅಭ್ಯರ್ಥಿಗಳು ಬರೆದಿದ್ದ ಪರೀಕ್ಷಾ ಫಲಿತಾಂಶ ಬಂದಿರಲಿಲ್ಲ. 2019ರ ಆಗಸ್ಟ್ 21ರಂದು ನಾನು ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಮರು ದಿನ ಈ ವಿಷಯದ ಕುರಿತಂತೆ ನಾನು ನನ್ನ ಪ್ರಯತ್ನ ಆರಂಭಿಸಿದ್ದೆ. ಆಗಿನ್ನೂ ನನಗೆ ಶಿಕ್ಷಣ ಇಲಾಖೆಯ ಜವಾಬ್ದಾರಿ ಘೋಷಣೆಯಾಗಿರಲಿಲ್ಲ. ಕೊನೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಉಪನ್ಯಾಸಕರ ಪರೀಕ್ಷಾ ಫಲಿತಾಂಶ ಪ್ರಕಟಿಸಿತು. ನಂತರ ಒಂದಷ್ಟು ಸಮಸ್ಯೆಗಳು ಉದ್ಭವಿಸಿದ್ದವು. ಬಳಿಕ ಈ ವರ್ಷ ಆಗಸ್ಟ್ನಲ್ಲಿ ಯಶಸ್ವಿ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು ಎಂದು ಸುರೇಶ್ ಕುಮಾರ್ ಹೇಳಿದರು.
ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕಿತ್ತು. ಆರ್ಥಿಕ ಇಲಾಖೆಯ ಆದೇಶದ ಹಿನ್ನೆಲೆ ಹಾಗೂ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಗಳ ಕಾರಣದಿಂದ ನೇಮಕಾತಿ ಆದೇಶ ನೀಡುವಲ್ಲಿ ವಿಳಂಬವಾಯಿತು. ನಾನು ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದಾಗ ನೇಮಕಾತಿ ಆದೇಶ ಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಅಭ್ಯರ್ಥಿಗಳಿಗೆ ಫೋನ್ ಮಾಡಿ, ಶೀಘ್ರದಲ್ಲೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದ್ದೆ. ಭರವಸೆ ನೀಡಿದಂತೆ ಮುಖ್ಯಮಂತ್ರಿಗಳ ಹಸ್ತದಿಂದ ಸಾಂಕೇತಿಕವಾಗಿ ಕೆಲವರಿಗೆ ನೇಮಕಾತಿ ಆದೇಶ ವಿತರಿಸಲಾಗಿದೆ ಎಂದಿದ್ದಾರೆ.
ಇಂದು ಒಟ್ಟು 28 ಉಪನ್ಯಾಸಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಇನ್ನುಳಿದವರ ನೇಮಕಾತಿ ಆದೇಶ ಪತ್ರಗಳನ್ನು ಪದವಿ ಪೂರ್ವ ಶಿಕ್ಷಣ ಮಂಡಳಿಯ ವೆಬ್ಸೈಟ್ನಲ್ಲಿ ಇಂದು ಅಪ್ಲೋಡ್ ಮಾಡಲಾಗುವುದು. ಸಂಬಂಧಪಟ್ಟ ಅಭ್ಯರ್ಥಿಗಳು ತಮ್ಮ ನೇಮಕಾತಿ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಪ್ರತಿ ಅಭ್ಯರ್ಥಿಯ ನೇಮಕಾತಿ ಆದೇಶವನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕವೂ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ನೇಮಕಾತಿ ಪ್ರಕ್ರಿಯೆ ಮತ್ತು ನೇಮಕಾತಿ ಆದೇಶವನ್ನು ನಿಯಮಾನುಸಾರ ಮಾಡಲಾಗಿದೆ. ಯಾವುದೇ ಅಭ್ಯರ್ಥಿ ಇದಕ್ಕಾಗಿ ಶಿಫಾರಸು ಮಾಡಿಸುವುದು, ಹಣ ಕೊಡುವುದು ಯಾವುದಕ್ಕೂ ಅವಕಾಶವಿರಲಿಲ್ಲ. ಹೊಸ ಉಪನ್ಯಾಸಕರು ಹೊಸ ಹುಮ್ಮಸ್ಸಿನಿಂದ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಲಿ ಎಂಬುದು ನನ್ನ ಅಪೇಕ್ಷೆ ಎಂದು ತಿಳಿಸಿದ್ದಾರೆ.