ಬೆಂಗಳೂರು: ಬಿಬಿಎಂಪಿ ಸದಸ್ಯರಿಗೆ ನೀಡಲಾಗುತ್ತಿರುವ ಅನುದಾನ ಬಳಕೆಗೆ ಸ್ಪಷ್ಟ ಮಾರ್ಗಸೂಚಿ ನೀಡಬೇಕು. ಮದರಸಾಗಳಲ್ಲಿ ಐಚ್ಛಿಕ ವಿಷಯಗಳನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಕಲಿಸಿ ಉರ್ದುವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು. ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಿಗೆ ನರೇಗಾ ಯೋಜನೆಯ ಅನುದಾನ ಬಳಸಿಕೊಂಡು ಮೂಲ ಸೌಲಭ್ಯ ಕಲ್ಪಿಸಬೇಕೆಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಶಾಸಕ ಕುಮಾರ್ ಬಂಗಾರಪ್ಪ ನೇತೃತ್ವದ ಸಮಿತಿ ಇಂದು ಸದನಕ್ಕೆ ವರದಿ ನೀಡಿದ್ದು, ಬಿಬಿಎಂಪಿ ಸದಸ್ಯರ ಅನುದಾನ ಬಳಕೆಗೆ ನಿರ್ದಿಷ್ಟವಾದ ಮಾರ್ಗಸೂಚಿಗಳಿಲ್ಲ. ಸರ್ಕಾರ ಕೂಡಲೇ ಅದಕ್ಕೆ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಸಮಗ್ರವಾದ ಜಾತಿ ಜನಗಣತಿ ಮಾಡಬೇಕು. ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ 38 ಸಾವಿರ ಔಷಧ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಬಹಳಷ್ಟು ಕಡೆ ಅವಧಿ ಮೀರಿದ ಔಷಧಗಳು ಮಾರಾಟವಾಗುತ್ತಿದೆ ಎಂಬ ಆರೋಪಗಳಿವೆ. ಆದರೆ, ಅದನ್ನು ಪರಿಶೀಲಿಸಲು ಸಿಬ್ಬಂದಿ ಕೊರತೆ ಇದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‍ಗಳಿಗೆ ಪ್ರತಿ ವರ್ಷ 8 ರಿಂದ 10 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಎರಡು ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ. ಹಾಸ್ಟೆಲ್‍ಗಳನ್ನು ಬಹುಮಹಡಿ ಕಟ್ಟಡಗಳನ್ನಾಗಿ ಮಾಡಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕೆಂದು ಸಲಹೆ ನೀಡಿದರು. ಕೆಲವು ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಊಟ ಮಾಡುವುದಕ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಉತ್ತರ ಕರ್ನಾಟಕ ಭಾಗಕ್ಕೆ ವೈದ್ಯಕೀಯ ಸೌಲಭ್ಯಗಳು ಸಕಾರಾತ್ಮಕವಾಗಿ ಲಭ್ಯವಾಗುತ್ತಿಲ್ಲ. ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.