ಬೆಂಗಳೂರು: ಶಾಲಾ- ಕಾಲೇಜು ಪುನಾರಂಭಕ್ಕೆ ಪರ ವಿರೋಧ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯದಲ್ಲಿ ಶಾಲೆ ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದು, ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಶಾಲಾ - ಕಾಲೇಜು ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ, ಶಾಲಾ- ಕಾಲೇಜು ಆರಂಭದ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಶಿಕ್ಷಣ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಅಕ್ಟೋಬರ್ನಲ್ಲಿ ಶಾಲೆ ಆರಂಭವಾಗುವುದು ಬಹುತೇಕ ಡೌಟ್ ಎನ್ನಲಾಗ್ತಿದೆ.
ಈ ಮಧ್ಯೆ ರಾಜ್ಯದಲ್ಲಿ ಶಾಲೆಗಳ ಪುನಾರಂಭ ವಿಚಾರವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆಂಥೋನಿ ಸೆಬಾಸ್ಟಿಯನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಮಾರ್ಗಸೂಚಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಶಿಫಾರಸ್ಸು ಪತ್ರದಲ್ಲಿ ಏನಿದೆ..?
ಶಾಲೆ ಆರಂಭಿಸುವ ಮುನ್ನ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು :
- ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕು.
- SDMC ಗ್ರಾಮ ಪಂಚಾಯತ್‌ಗಳ ಸಹಕಾರದಿಂದ ಶಾಲಾ ಕೊಠಡಿಗಳು, ಪೀಠೋಪಕರಣ ಸ್ವಚ್ಛಗೊಳಿಸಬೇಕು. ಸ್ಯಾನಿಟೈಸೇಷನ್ ಕಡ್ಡಾಯ.
- ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ತೊಟ್ಟಿ, ವಾಶ್ ಬೇಸಿನ್ಗಳನ್ನು ಕ್ಲೋರಿನ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು.
- ಶೌಚಾಲಯಗಳನ್ನು ದುರಸ್ತಿಗೊಳಿಸಬೇಕು. ಕೈ ತೊಳೆಯಲು ಅಗತ್ಯ ಸಾಬೂನು ಮತ್ತು ನಿರಂತರ ನೀರಿನ ಸೌಲಭ್ಯವನ್ನು ಖಾತರಿಪಡಿಸಿಕೊಳ್ಳಬೇಕು.
- ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಗುಣಮಟ್ಟದ ಮಾಸ್ಕ್ ಒದಗಿಸಬೇಕು. ದೈಹಿಕ ಮತ್ತು ಸಾಮಾಜಿಕ ಅಂತರ ಪಾಲಿಸುವಂತೆ ಜಾಗೃತಿ ಮೂಡಿಸಬೇಕು.
- ಶಾಲಾ ಆವರಣಗಳನ್ನು ಸೋಂಕು ನಿವಾರಣೆಗೊಳಿಸಬೇಕು.
ಮಕ್ಕಳಿಗೆ ಒದಗಿಸಬೇಕಾದ ಅವಶ್ಯಕತೆಗಳು
- ಶುಚಿತ್ವದಿಂದ ಕೂಡಿದ ಬೆಳಗಿನ ಬಿಸಿ ಹಾಲು ನೀಡಬೇಕು
- ಮಧ್ಯಾಹ್ನದ ಪೌಷ್ಟಿಕಯುಕ್ತ ಬಿಸಿಯೂಟವನ್ನು ಮಕ್ಕಳಿಗೆ ಒದಗಿಸಬೇಕು
- ಉಚಿತ ಕೋವಿಡ್ ಎಚ್ಚರಿಕೆ ಸಾಧನಗಳನ್ನು ಪೂರೈಸಬೇಕು.
- ಆಹಾರದ ಜೊತೆ ಮಕ್ಕಳಿಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು
- ಎಲ್ಲ ಮಕ್ಕಳಿಗೆ ಆರೋಗ್ಯ ಪರೀಕ್ಷೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು
- ರಾಜ್ಯಾದ್ಯಂತ ಶಿಕ್ಷಕರು ಹಾಗೂ ಮಕ್ಕಳಿಗೆ ಮಾದರಿ ಪರೀಕ್ಷೆ ನಡೆಸಿ ಸೋಂಕು ಕಂಡು ಬಂದಲ್ಲಿ ವೈದ್ಯಕೀಯ ಸೇವೆ ಒದಗಿಸಬೇಕು
- ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆಯಾಗಬೇಕು
- ಮಕ್ಕಳ ಶೂ, ಶಾಲಾ ಬ್ಯಾಗ್ ಇಡಲು ಒಂದು ರ್ಯಾಕ್ ವ್ಯವಸ್ಥೆ ಮಾಡಬೇಕು
ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳು
- ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಒಳಪಡಬೇಕು
- ಶಾಲೆಗೆ ಆಗಮಿಸಿದ ವ್ಯಕ್ತಿಗಳ ಮಾಹಿತಿಯ ಪುಸ್ತಕವನ್ನು ಕಡ್ಡಾಯವಾಗಿ ನಿರ್ವಹಿಸಬೇಕು
- ಶಾಲೆಗೆ ಆಗಮಿಸುವ ಯಾವುದೇ ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ಶಿಕ್ಷಕರು ಬೋಧನೆ ಮಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು
- ಗುಂಪು ಚಟುವಟಿಕೆ , ವೈಯಕ್ತಿಕ ಚಟುವಟಿಕೆ ಸಂದರ್ಭ ಸಾಮಾಜಿಕ ಅಂತರಕ್ಕೆ ಮಹತ್ವವನ್ನು ನೀಡಬೇಕು
ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ :
- ಬಿಸಿಯೂಟಕ್ಕಾಗಿ ಇರುವ ಅಡುಗೆ ಕೋಣೆಯನ್ನು ಸ್ವಚ್ಛ ಮಾಡಬೇಕು
- ಅಡುಗೆ ಮಾಡುವ ಸಾಮಗ್ರಿಗಳನ್ನು ಸ್ವಚ್ಛವಾಗಿ ತೊಳೆಯಬೇಕು
- ಅಡುಗೆ ಮಾಡುವ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು
- ಅವರಿಗೆ ರೋಗದ ಗುಣಲಕ್ಷಣ ಕಂಡು ಬರದೇ ಇದ್ದಲ್ಲಿ ಅವರ ಸೇವೆ ಪಡೆಯಬಹುದಾಗಿದೆ
- ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಿರಬೇಕು
- ಅಡುಗೆ ಸಿಬ್ಬಂದಿಗಳಿಗೆ ವೈಯಕ್ತಿಕ ಸ್ವಚ್ಛತೆ ಕುರಿತು ಮಾರ್ಗದರ್ಶನ ನೀಡಬೇಕು
ಶಾಲೆಗಳ ಪ್ರಾರಂಭ ಹಾಗೂ ಶೈಕ್ಷಣಿಕ ಕಾರ್ಯಕ್ರಮ :
- 2020-21 ನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು
- ಮೊದಲು 30ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ /ಹಿರಿಯ ಶಾಲೆಗಳನ್ನು ಆರಂಭಿಸಬೇಕು
- ಈ ಶಾಲೆಗಳು ಮೊದಲ ಹದಿನೈದು ದಿನ ಅರ್ಧ ದಿವಸ ಕಾರ್ಯನಿರ್ವಹಿಸಬೇಕು
- ಹಿರಿಯ ಪ್ರಾಥಮಿಕ ಶಾಲೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು
- ಉಳಿದಂತೆ ಹೆಚ್ಚಿನ ಸಂಖ್ಯೆಯಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು
- ಶಾಲೆ ತೆರೆದ ನಂತರ ಕಲಿಕೆ ಮತ್ತು ಅನುಭವಗಳೊಂದಿಗೆ ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಹೊಸ ಮಾರ್ಗಸೂಚಿ
- ಎರಡು ಪಾಳಿಯಲ್ಲೂ ಶಾಲೆಗೆ ಬರುವ ಮಕ್ಕಳಿಗೆ ಎಲ್ಲ ಸೌಲಭ್ಯ ಒದಗಿಸಬೇಕು
ರಾಜ್ಯದಲ್ಲಿ ಬಾಲ್ಯವಿವಾಹ ಹೆಚ್ಚಾಗ್ತಿದೆ, ಜೊತೆಗೆ ಮಕ್ಕಳು ಕೂಲಿ ಕಾರ್ಮಿಕರಾಗ್ತಿದಾರೆ. ಹೀಗಾಗಿ ಶಾಲೆ - ಕಾಲೇಜು ಆರಂಭಿಸುವಂತೆ ಶಿಫಾರಸು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಈ ಶಿಫಾರಸಿಗೆ ಖಾಸಗಿ ಶಾಲಾ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಶಿಫಾರಸು ಪಾಲನೆ ಮಾಡಿಲ್ಲ ಎಂದು ವಸೂಲಿ ಮಾಡುವುದಕ್ಕೆ ಇದು ಕಾರಣವಾಗಲಿದೆ ಎಂದು ಖಾಸಗಿ ಶಾಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.