ಬೆಂಗಳೂರು: ಉಪ ನೋಂದಣಿ ಕಚೇರಿಗಳಲ್ಲಿ ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮ ವರ್ಗಾವಣೆಯಾಗುತ್ತಿರುವ ಮತ್ತು ಸರ್ಕಾರದ ಲೆಕ್ಕ ಶೀರ್ಷಿಕೆ/ ಕಚೇರಿಗಳು ಕಾನೂನು ಬಾಹಿರ ಮತ್ತು ಹವಾಲ ವ್ಯವಹಾರಗಳಿಗೆ ದುರ್ಬಳಕೆಯಾಗುತ್ತಿರುವ ಹಿನ್ನೆಲೆ ಎಲ್ಲ ಉಪ ನೋಂದಣಿ ಕಚೇರಿಯಲ್ಲಿ ನಗದು ಮತ್ತು ಡಿಮ್ಯಾಂಡ್ ಡ್ರಾಫ್ಟ್ ಗಳು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ.
ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ಉಪ ನೋಂದಣಿ ಕಚೇರಿಗಳಲ್ಲಿ ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮ ವರ್ಗಾವಣೆಯಾಗುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಜೊತೆಗೆ ಸರ್ಕಾರದ ಲೆಕ್ಕ ಶೀರ್ಷಿಕೆ/ ಕಚೇರಿಗಳು ಕಾನೂನು ಬಾಹಿರ ಮತ್ತು ಹವಾಲ ವ್ಯವಹಾರಗಳಿಗೆ ದುರ್ಬಳಕೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಇದೀಗ ಎಲ್ಲಾ ಉಪ ನೋಂದಣಿ ಕಚೇರಿಯಲ್ಲಿ ನಗದು ಮತ್ತು ಡಿಮ್ಯಾಂಡ್ ಡ್ರಾಫ್ಟ್ಗಳು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ. ಎಲ್ಲ ಹಣಕಾಸು ವ್ಯವಹಾರಗಳು ಬ್ಯಾಂಕ್ ಮೂಲಕ ಅಥವಾ ಡಿಜಿಟಲ್ ಪೇಮೆಂಟ್ ಮೂಲಕವೇ ನಡೆಸಬೇಕು ಎಂದು ಆದೇಶ ಹೊರಡಿಸಿದೆ.
ಖಜಾನ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಲಿಂಕ್ ಮಾಡುವವರೆಗೆ ಹಣ ಪಾವತಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಉಪ ನೋಂದಣಾಧಿಕಾರಿಗಳು ಪ್ರಮಾಣೀಕರಿಸಿದ ನಂತರವೇ ನೋಂದಣಿ ಮಾಡಲು ಆದೇಶಿಸಿದೆ. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ವಿಧಾನದಲ್ಲಿ ನಗದು ರೂಪದಲ್ಲಿ ಸ್ವೀಕರಿಸಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.