ಬೆಂಗಳೂರು : ಸ್ಪೀಕರ್ ರಮೇಶ್ಕುಮಾರ್ 17 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ. ಈದರ ಬೆನ್ನಲ್ಲೇ ರೆಬೆಲ್ಸ್ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸ್ಪೀಕರ್ ಆದೇಶಕ್ಕೆ ಮೊದಲು ತಡೆಯಾಜ್ಞೆ ನೀಡಬೇಕು ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಕೋರಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ಅರ್ಜಿ ಬಾಕಿ ಉಳಿದಿದ್ದು, ಸ್ಪೀಕರ್ ಅವರ ತೀರ್ಪನ್ನು ಪ್ರಶ್ನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ಅನರ್ಹಗೊಳಿಸಲಾರರು, ಬದಲಾಗಿ ರಾಜೀನಾಮೆಯನ್ನು ಸ್ವೀಕರಿಸಲಿದ್ದಾರೆಂದು ಅತೃಪ್ತ ಶಾಸಕರು ಭಾವಿಸಿದ್ದರು. ಆದರೆ, ರಾಜೀನಾಮೆ ಪತ್ರವನ್ನು ಪರಿಗಣಿಸದೆ ಶಾಸಕಾಂಗ ಪಕ್ಷದ ನಾಯಕರು ನೀಡಿದ ದೂರನ್ನೇ ಪರಿಗಣಿಸಿ ಅನರ್ಹತೆ ತೀರ್ಪು ನೀಡಿರುವುದು ಸಮಂಜಸವಲ್ಲ. ತೀರ್ಪು ಏಕಪಕ್ಷೀಯವಾಗಿದೆ. ಸ್ವಇಚ್ಛೆಯಿಂದ ನೀಡಿರುವ ರಾಜೀನಾಮೆ ಅಂಗೀಕರಿಸದಿರುವುದು ಶಾಸಕರ ಹಕ್ಕು ಮೊಟಕುಗೊಳಿಸಿದಂತೆ ಎಂದು ಅತೃಪ್ತರು ಆರೋಪಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ಅತೃಪ್ತ ಶಾಸಕರು ಮುಂದಾಗಿದ್ದಾರೆ.