ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗದೇ ಇರುವುದರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಯ ಸಂವೇದಾ ಪಾಠಗಳನ್ನು ಜನವರಿ 4ರಿಂದ ಮರು ಪ್ರಸಾರ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ತರಗತಿಗಳಿಗೆ ಕಳೆದ ಜುಲೈ 20ರಿಂದ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು 2021ರ ಜ. 1ಕ್ಕೆ ಪೂರ್ಣಗೊಳ್ಳಲಿವೆ. ಜ. 1ರಿಂದ 10ನೇ ತರಗತಿಗೆ ಶಾಲಾ ತರಗತಿಗಳು ಮತ್ತು 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ತರಗತಿಗಳು ಆರಂಭವಾಗುತ್ತಿವೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಚಂದನ ವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಪ್ರಸಾರವಾಗುತ್ತಿದ್ದ ಪಾಠಗಳನ್ನು ಜ. 4ರಿಂದ ಮರು ಪ್ರಸಾರ ಮಾಡಲಾಗುತ್ತಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿರುವುದರಿಂದ ಉತ್ತೇಜಿತವಾಗಿರುವ ಜಿಯೋ ವಾಹಿನಿಯವರು 5ರಿಂದ 10ನೇ ತರಗತಿಯ ವಿಡಿಯೋ ಪಾಠಗಳನ್ನು ಉಚಿತವಾಗಿ ಪ್ರಸಾರ ಮಾಡಲು ಮುಂದೆ ಬಂದಿದ್ದು, ಈ ಕುರಿತು ಕ್ರಮ ವಹಿಸಲಾಗುತ್ತಿದೆ ಎಂದರು.
ಇದನ್ನೂ ಓದಿ : ಜನವರಿಯಿಂದ ಶಾಲೆಗಳು ಪುನಾರಂಭ : ಶಿಕ್ಷಣ ಸಚಿವರಿಂದ ಶಾಲಾ-ಕಾಲೇಜುಗಳಿಗೆ ರೌಂಡ್ಸ್
ಸದ್ಯದಲ್ಲೇ ಜಿಯೋ ವಾಹಿನಿ ಮೂಲಕ ಪ್ರಸಾರವಾಗುವ ತರಗತಿಗಳ ಕುರಿತು ವಿವರಣೆ ನೀಡಲಾಗುತ್ತೆ. 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ರೇಡಿಯೋ ಪಾಠಗಳನ್ನು ಸಿದ್ಧಪಡಿಸಲಾಗುತ್ತಿದೆ. ಜ. 2ನೇ ವಾರದಿಂದ ಆಕಾಶವಾಣಿಯ 13 ಕೇಂದ್ರಗಳ ಮೂಲಕ ಈ ರೇಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತೆ. ಹಾಗಾಗಿ ಚಂದನ ವಾಹಿನಿಯಲ್ಲಿ ರಿವಿಜನ್ ಪಾಠಗಳು ಮತ್ತು ರೇಡಿಯೋ ಪಾಠಗಳ ಪ್ರಯೋಜನ ಪಡೆಯಬೇಕೆಂದು ಸಚಿವರು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನವಿ ಮಾಡಿದ್ದಾರೆ.