ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಟೀಕಿಸುವ ಭರದಲ್ಲಿ ಉನ್ನತ ಸಾಂವಿಧಾನಿಕ ಹುದ್ದೆಯ ಪ್ರತಿಷ್ಠೆ ಮತ್ತು ಘನತೆಯನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.
ಸ್ಪೀಕರ್ ಕುರಿತು ‘ಅವನ್ಯಾವನೋ ಪುಣ್ಯಾತ್ಮನನ್ನು ಸ್ಪೀಕರ್ ಮಾಡಿ ಬಿಟ್ಟಿದ್ದಾರೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯನವರ ನಡವಳಿಕೆ ಶಾಸನ ಸಭೆಗೆ ತೋರಿದ ಅಗೌರವ. ಇಂತಹ ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರು ಹೊಸಬ, ಏನೂ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾರೂ ಒಪ್ಪಲ್ಲ. ಸ್ವತಃ ತವರು ಕ್ಷೇತ್ರದಲ್ಲಿ ಗೆಲ್ಲಲಾಗದೇ ತಿರಸ್ಕೃತಗೊಂಡ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು.
ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಯನ್ನು ಸೃಷ್ಟಿಸಿರುವುದೇ ಸದನದ ಸದಸ್ಯರನ್ನು ನಿಯಂತ್ರಿಸಲಿಕ್ಕೆ. ಸದನದಲ್ಲಿ ಸದಸ್ಯನಿಗೆ ಮಾತನಾಡಲು ಕಾಲಮಿತಿ ನಿಗದಿ ಮಾಡುವುದು ಸ್ಪೀಕರ್ ಪರಮಾಧಿಕಾರ. ತನಗೆ ಹೆಚ್ಚು ಅವಧಿ ಮಾತನಾಡಲು ಅವಕಾಶ ನೀಡುವುದಿಲ್ಲ ಎನ್ನುವ ಸಿಟ್ಟಿಗೆ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ. ಸದನದ ಹೊರಗೆ ಮಾತನಾಡಿ ಸದನಕ್ಕಿರುವ ಘನತೆ ಗೌರವವನ್ನು ಗಾಳಿಗೆ ತೂರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿಗಳೇ ಸದನಕ್ಕೆ ಅಗೌರವ ತೋರುವಂತೆ ಮಾತನಾಡುವ ಪರಂಪರೆಯನ್ನು ಮುಂದುವರೆಸಬಾರದು ಎಂದು ಬಿಜೆಪಿ ಆಗ್ರಹಪಡಿಸುತ್ತದೆ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ ಸಿದ್ದರಾಮಯ್ಯನವರ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾದೀತು ಎಂದು ಪತ್ರಿಕಾ ಹೇಳಿಕೆ ಮೂಲಕ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.