ಬೆಂಗಳೂರು: ಟಿಕೆಟ್ ವಂಚಿತ ಫೈಟರ್ ರವಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಫೈಟರ್ ರವಿ ನಾಗಮಂಗಲ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ನಾಗಮಂಗಲ ಕ್ಷೇತ್ರದಲ್ಲಿ ಶಿವರಾಮೇಗೌಡ ಪತ್ನಿ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ನೀಡಿದೆ.
ನಾಗಮಂಗಲ ಟಿಕೆಟ್ಗಾಗಿ ಫೈಟರ್ ರವಿ ಹಾಗೂ ಜೆಡಿಎಸ್ ಉಚ್ಛಾಟನೆಗೊಂಡು ಬಿಜೆಪಿ ಸೇರಿದ್ದ ಎಲ್.ಆರ್. ಶಿವರಾಮೇಗೌಡ ಮಧ್ಯೆ ಪೈಪೋಟಿ ನಡೆದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಶಿವರಾಮೇಗೌಡ ಪತ್ನಿಗೆ ಟಿಕೆಟ್ ನೀಡಿದೆ. ಇದರಿಂದ ರವಿ ತೀವ್ರ ಅಸಮಾಧಾನಗೊಂಡಿದ್ದರು. ಇತ್ತ ಟಿಕೆಟ್ ವಂಚಿತ ಬಿ.ಎಂ. ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ ಇದೀಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಮೊದಲು ಫೈಟರ್ ರವಿ (ಮಲ್ಲಿಕಾರ್ಜುನ್) ನಾಗಮಂಗಲ ಅಭ್ಯರ್ಥಿ ಎಂದು ಬಿಂಬಿತವಾಗಿತ್ತು. ಅವರಿಗೆ ರೌಡಿಶೀಟರ್ ಆರೋಪ ಇರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿದೆ. ಫೈಟರ್ ರವಿ ಸಂಬಂಧ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ರೌಡಿ ಮೋರ್ಚಾ ಎಂದು ಟೀಕಿಸಿದ್ದರು.
ಸುಧಾ ಅವರಿಗೆ ಕ್ಷೇತ್ರದಲ್ಲಿ ಉತ್ತಮ ಹೆಸರಿದ್ದು, ರಾಜಕೀಯ ಹಿನ್ನೆಲೆಯೂ ಇದೆ. ಹೀಗಾಗಿ ಬಿಜೆಪಿ ಹೈ ಕಮಾಂಡ್ ಅವರಿಗೆ ಮಣೆ ಹಾಕಿದೆ.
ಇದನ್ನೂ ಓದಿ: ಮೂರು ಪಕ್ಷಗಳು ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳೆಷ್ಟು..?