ಬೆಂಗಳೂರು: ಖಾಕಿ ಕೋಟೆ ಒಳಗಿರುವ ಪಾತಕಿ ರವಿ ಪೂಜಾರಿಯನ್ನ ಸಿಸಿಬಿ ಅಧಿಕಾರಿಗಳು ಮತ್ತಷ್ಟು ಡ್ರಿಲ್ ಮಾಡಿದ್ದು, ವಿಚಾರಣೆ ವೇಳೆ ಆತ ತನ್ನ ಬಲಗೈ ಬಂಟನ ಹೆಸರನ್ನು ಬಹಿರಂಗ ಪಡಿಸಿದ್ದಾನೆ ಎಂದು ಹೇಳಲಾಗ್ತಿದೆ.
ಪಾತಕ ಲೋಕವನ್ನು ಆಳುವಾಗ ರವಿ ಪೂಜಾರಿ ಜೊತೆ ಹಲವು ಸಹಚರರು ಇದ್ದರು. ಅವರಲ್ಲಿ ಪ್ರಮುಖವಾಗಿ ಅನೇಕ ಪ್ರಕರಣಗಳಲ್ಲಿ ರವಿ ಪೂಜಾರಿ ಜೊತೆ ಸುರೇಶ್ ಪೂಜಾರಿ ಎಂಬಾತನ ಹೆಸರು ತಳುಕು ಹಾಕಿಕೊಂಡಿದೆ. ಈತ ತನ್ನ ಬಲಗೈ ಬಂಟನಂತೆ ಇದ್ದು, 47 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ವಿಚಾರವನ್ನ ರವಿ ಪೂಜಾರಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸುರೇಶ್ ಪೂಜಾರಿ ರಾಜ್ಯದ ಉದ್ಯಮಿಗಳು, ಬಿಲ್ಡರ್, ರಾಜಕೀಯ ವ್ಯಕ್ತಿಗಳು, ನಟರ ನಂಬರ್ ಸಂಗ್ರಹಿಸಿ ಬಳಿಕ ದೂರದ ದೇಶದಲ್ಲಿದ್ದ ರವಿ ಪೂಜಾರಿಗೆ ಇಂಚಿಂಚು ಮಾಹಿತಿಯನ್ನು ನೀಡುತ್ತಿದ್ದ. ಬಳಿಕ ರವಿ ಪೂಜಾರಿಯು ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಸದ್ಯ ರವಿ ಪೂಜಾರಿ ಬಂಧನದ ಬಳಿಕ ಸುರೇಶ್ ಪೂಜಾರಿ ನಾಪತ್ತೆಯಾಗಿದ್ದಾನೆ. ಆತನ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಸದ್ಯ ರವಿ ಪೂಜಾರಿ ನೀಡಿರುವ ಮಾಹಿತಿ ಆಧರಿಸಿ ಸುರೇಶ್ ಪೂಜಾರಿ ಬಗ್ಗೆ ಮಾಹಿತಿ ಕಲೆ ಹಾಕಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ದೂರದ ದೇಶದಲ್ಲಿ ಕುಳಿತ ರವಿ ಪೂಜಾರಿಗೆ ಬಲಗೈ ಬಂಟನಾಗಿ ಕರ್ನಾಟಕದಲ್ಲಿದ್ದ ಸುರೇಶ್ ಪೂಜಾರಿ ಕೆಲಸ ಮಾಡಿದ್ದ. ಬೆಂಗಳೂರಲ್ಲಿ ರವಿ ಪೂಜಾರಿಯ ವಿರುದ್ಧ ದಾಖಲಾಗಿರುವ ಹಲವು ಕೇಸ್ಗಳಲ್ಲಿ ಸುರೇಶ್ ಪೂಜಾರಿ ಎರಡನೇ ಆರೋಪಿ ಎಂದು ಹೆಸರು ಉಲ್ಲೇಖವಾಗಿದೆ ಎನ್ನಲಾಗ್ತಿದೆ.