ಬೆಂಗಳೂರು: ಯಡಿಯೂರಪ್ಪರ ಕಪ್ಪಕಾಣಿಕೆಯ ಡೈರಿ ನಕಲಿ ದಾಖಲೆ ಎಂದು ಐಟಿ ಇಲಾಖೆ ಸ್ಪಷ್ಟೀಕರಣ ನೀಡಿದ್ದು, ಕೂಡಲೇ ಕಾಂಗ್ರೆಸ್ ಮುಖಂಡ ಸುರ್ಜೇವಾಲರನ್ನು ಬಂಧಿಸಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಕಲಿ ದಾಖಲೆಯನ್ನು ತೋರಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಅವರು ದಾಖಲೆಯನ್ನು ಪರಿಶೀಲಿಸದೇ ದೊಡ್ಡ ತಪ್ಪನ್ನು ಮಾಡಿದ್ದಾರೆ. ಇದರ ವಿರುದ್ಧ ಚುನಾವಣಾಧಿಕಾರಿಗೆ ನಾವು ದೂರು ನೀಡಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೆಲವು ನಾಯಕರಿದ್ದು, ಸೆಲ್ಫ್ ಗೋಲ್ ಮಾಡೋದ್ರಲ್ಲಿ ನಿಸ್ಸೀಮರು. ಅದರಲ್ಲಿ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಒಬ್ಬರು. ಯಾವುದೋ ಶೀಟ್ ತೋರಿಸಿ, ಯಡಿಯೂರಪ್ಪ ಡೈರಿ ಎಂದ್ರು. ಲೋಕಪಾಲಕ್ಕೆ ಈ ಪ್ರಕರಣ ಹೋಗುತ್ತೆ ಅಂದ್ರು. 1800 ಕೋಟಿ ರೂ.ಗಳನ್ನ ಬಿಜೆಪಿ ಹೈಕಮಾಂಡ್‌ಗೆ ಕೊಟ್ಟಿದ್ದಾರೆ ಅಂದ್ರು. ಸಿದ್ದರಾಮಯ್ಯ ಕೂಡ ಅದನ್ನು ಲೋಕಪಾಲ್‌ಗೆ ವಹಿಸಿ ಅಂದ್ರು. ಕಾಂಗ್ರೆಸ್ಗೆ ಈ ಬಗ್ಗೆ ಗೊತ್ತಿದ್ರೂ ದೂರು ನೀಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹೊಡಿ-ಕಡಿ ಸಂಸ್ಕೃತಿ ಹೆಚ್ಚಾಗಿದೆ:
ಸಮ್ಮಿಶ್ರ ಸರ್ಕಾರದಲ್ಲಿ ಹೊಡಿ-ಕಡಿ ಸಂಸ್ಕೃತಿ ಹೆಚ್ಚಾಗಿದೆ. ಕೆಲವು ವಾರಗಳ ಹಿಂದೆ ಬೇಳೂರು ಗೋಪಾಲ ಕೃಷ್ಣ ಪ್ರಧಾನಿ ಮೋದಿ ಶೂಟ್ ಮಾಡುವ ಹೇಳಿಕೆ ನೀಡಿದ್ರು. ಇಂದು ಮೋದಿ ಬಂದ್ರೆ ಕಲ್ಲಲ್ಲಿ ಹೊಡಿರಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಮೋದಿ ಮೇಲಿನ ಕೋಪ ಈ ಮಾತುಗಳಲ್ಲಿ ವ್ಯಕ್ತ ಆಗ್ತಿದೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲಿದ್ದೇವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲೆ ಧರಣಿ ಆತ್ಮಹತ್ಯೆ ಬಗ್ಗೆ ಕೈ ನಾಯಕರ ನಿಲುವೇನು?:
ರೋಹಿತ್ ವೆಮುಲ ಪ್ರಕರಣ ಉಸ್ಮಾನಿಯ ಯೂನಿವರ್ಸಿಟಿಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿಬಿಜೆಪಿಯನ್ನು ಆರೋಪಿ ಸ್ಥಾನದಲ್ಲಿಡುವ ಪ್ರಯತ್ನ ಮಾಡಿದ್ರು. ಇದೀಗ ಬೆಂಗಳೂರಿನಲ್ಲಿ ವಕೀಲೆ ಧರಣಿ ಎಂಬುವರು ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿಬಿಎಂಪಿ ಸದಸ್ಯ ಸುರೇಶ್ ಕೊಡಬಾರದ ಕಷ್ಟ ಕೊಟ್ಟು ಹಿಂಸೆ ಮಾಡಿದ್ದರು ಎಂದು ಆರೋಪಿಸಿದರು.
ವಕೀಲೆ ದೂರು ನೀಡಿದ್ರೂ ಪೊಲೀಸರು ಸ್ವೀಕರಿಸಲಿಲ್ಲ. ಪೊಲೀಸರು ಅವಳನಿಧನದ ನಂತರ ಬಂದ್ರು. ಮೊದಲೇ ಪೊಲೀಸರು ಬಂದಿದ್ರೆ ವಕೀಲೆ ಧರಣಿ ಬದುಕುತಿದ್ರು. ಶಾಸಕನೊಬ್ಬ ಇನ್ನೊಬ್ಬ ಶಾಸಕನಿಗೆ ಹೊಡೆದ್ರೆ ಆತನ ಬಂಧನ ತಕ್ಷಣ ಆಗೋಲ್ಲ. ವಕೀಲೆ ಮೇಲೆ ದೌರ್ಜನ್ಯ ಮಾಡಿದ ಬಿಬಿಎಂಪಿ ಸದಸ್ಯ ಸಿಗೋಲ್ಲ. ಈಗ ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಸದಸ್ಯನ ಬಂಧನ ಆಗಿದೆ. ಕಾಂಗ್ರೆಸ್ ಈಗ ಏನು ಕ್ರಮ ಕೈಗೊಳ್ಳುತ್ತೆ ನೋಡಬೇಕು. ಜತೆಗೆ ಪೊಲೀಸರ ಕಾರ್ಯವೈಖರಿ ಮೇಲೆ ತನಿಖೆ ಅಗತ್ಯ ಇದೆ ಎಂದು ಆಗ್ರಹಿಸಿದರು.