ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿದೆ. ರಂದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ಈ ಹಿಂದೆ ಕೆ ಸಿ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಕಂಡ ಹಿನ್ನೆಲೆ ಕೆ.ಸಿ.ವೇಣುಗೋಪಾಲ್ ರನ್ನು ಬದಲಾಯಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಇದೀಗ ಎಐಸಿಸಿ ಕೆ.ಸಿ.ವೇಣುಗೋಪಾಲ್ ಸ್ಥಾನಕ್ಕೆ ರಂದೀಪ್ ಸಿಂಗ್ ಸುರ್ಜೇವಾಲಾರನ್ನು ರಾಜ್ಯದ ಉಸ್ತುವಾರಿಯಾಗಿ ನೇಮಿಸಿದೆ.
ಇನ್ನು ದಿನೇಶ್ ಗುಂಡೂರಾವ್ಗೆ ತಮಿಳುನಾಡು ಪುದುಚೇರಿ ಮತ್ತು ಗೋವಾ ಉಸ್ತುವಾರಿ ನೀಡಲಾಗಿದ್ದರೆ, ಹೆಚ್.ಕೆ.ಪಾಟೀಲ್ ಗೆ ಮಹಾರಾಷ್ಟ್ರ ಉಸ್ತುವಾರಿ ನೀಡಿದೆ. ಇತ್ತ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ಕಳೆದುಕೊಂಡಿದ್ದಾರೆ. ಖರ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಂದುವರಿದಿದ್ದಾರೆ. ಐವರು ಸದಸ್ಯರ ಸೆಂಟ್ರಲ್ ಎಲೆಕ್ಷನ್ ಕಮಿಟಿಯಲ್ಲಿ ರಾಜ್ಯದ ಕೃಷ್ಣಭೈರೇಗೌಡರಿಗೆ ಸ್ಥಾನ ಸಿಕ್ಕಿದೆ. ಮಧುಸೂಧನ್ ಮಿಸ್ತ್ರಿ ನೇತೃತ್ವದ ಸಮಿತಿಯಲ್ಲಿ ರಾಜೇಶ್ ಮಿಶ್ರಾ, ಕೃಷ್ಣಭೈರೇಗೌಡ, ಜ್ಯೋತಿಮಣಿ, ಅರವಿಂದ್ ಸಿಂಗ್ ಲೊವೆಲಿ ಸದಸ್ಯರಾಗಿರಲಿದ್ದಾರೆ.
ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ರಾಜ್ಯದ ಐವರಿಗೆ ಅವಕಾಶ ನೀಡಲಾಗಿದೆ. 22 ಸದಸ್ಯರ ಕಮಿಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿದಿದ್ದರೆ, ಕಾಯಂ ಸದಸ್ಯತ್ವ ಸ್ಥಾನದಲ್ಲಿ ದಿನೇಶ್ ಗುಂಡೂರಾವ್, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪಗೆ ಅವಕಾಶ ನೀಡಲಾಗಿದೆ. ಇನ್ನು ವಿಶೇಷ ಆಹ್ವಾನಿತರಲ್ಲಿ ಬಿ.ವಿ.ಶ್ರೀನಿವಾಸ್ಗೆ ಅವಕಾಶ ನೀಡಲಾಗಿದೆ.