ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇಂದು ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಬಿಎಂಪಿ ಚುನಾವಣಾ ಪ್ರಣಾಳಿಕೆ ಸಭೆಯ ಬಳಿಕ ಸುರ್ಜೇವಾಲಾ ನೇರವಾಗಿ ಸಂಜಯ್ ನಗರದಲ್ಲಿರುವ ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.
ಮುನಿಯಪ್ಪ ಮನೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ: ಸಂಜೆ 4:30ರ ವೇಳೆಗೆ ಮುನಿಯಪ್ಪ ಮನೆಗೆ ತೆರಳಿ ಅವರ ಜೊತೆ ಸುರ್ಜೇವಾಲಾ ಸುದೀರ್ಘ ಸಮಾಲೋಚನೆ ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ. ರಾಜ್ಯ ನಾಯಕರದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಕೋಲಾರ ಜಿಲ್ಲೆಯ ಮುಖಂಡರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಎಂ ಸಿ ಸುಧಾಕರ್ ಹಾಗೂ ಕೊತ್ತೂರು ಮಂಜುನಾಥ್ ಸೇರ್ಪಡೆಗೆ ತಮ್ಮನ್ನು ಪರಿಗಣಿಸಲೇ ಇಲ್ಲ ಎಂದು ಮುನಿಯಪ್ಪ ಮುನಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇವರ ಮುನಿಸು ಕಡಿಮೆಗೊಳಿಸುವ ಉದ್ದೇಶದಿಂದ ಸುರ್ಜೇವಾಲಾ ಭೇಟಿ ನೀಡಿ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಿರಿಯ ನಾಯಕ ಮುನಿಯಪ್ಪ ಅಸಮಾಧಾನ: ಇನ್ನೊಂದೆಡೆ ಮುನಿಯಪ್ಪ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳು ಸಹ ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಮೊನ್ನೆಯಷ್ಟೇ ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ್ದ ಮುನಿಯಪ್ಪ, ಸುದೀರ್ಘ ಚರ್ಚೆ ನಡೆಸಿ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದ್ದರು. ರಾಷ್ಟ್ರೀಯ ನಾಯಕರಲ್ಲಿ ಕೆಲವರು ರಾಹುಲ್ ಗಾಂಧಿ ನಾಯಕತ್ವವನ್ನು ಖಂಡಿಸಿ ಪಕ್ಷ ತೊರೆಯುವ ಕಾರ್ಯ ಮಾಡುತ್ತಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮುನಿಯಪ್ಪ ಸಹ ರಾಹುಲ್ ಗಾಂಧಿ ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ನಡೆಸುವ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರೆ ದೊಡ್ಡಮಟ್ಟದ ಅವಮಾನವನ್ನು ಎದುರಿಸಬೇಕಾಗುತ್ತದೆ. ಈ ರೀತಿ ಎದುರಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸುರ್ಜೆವಾಲಾ ಮುಂಚಿತವಾಗಿಯೇ ಮುನಿಯಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಭೇಟಿ ವೇಳೆ ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಳ್ಳುವಂತೆ ಹಾಗೂ ಆಗಿರುವ ಬೇಸರವನ್ನು ಶಮನಗೊಳಿಸಲು ತಾವು ಪ್ರಯತ್ನಿಸುವುದಾಗಿ ಮುನಿಯಪ್ಪ ಅವರಿಗೆ ಸುರ್ಜೇವಾಲಾ ಭರವಸೆ ನೀಡಿದ್ದಾರೆ. ಜೊತೆಗೆ ಪಕ್ಷದ ಚಟುವಟಿಕೆಯಲ್ಲಿ ಹಿಂದಿನಂತೆಯೇ ಪಾಲ್ಗೊಳ್ಳುವಂತೆ ಮಾನವಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
(ಇದನ್ನೂ ಓದಿ: ರಮೇಶ್ ಕುಮಾರ್ ಒಬ್ಬ ಶಕುನಿ, ಏಕಪಾತ್ರಾಭಿನಯ ಮಾಡುತ್ತಿದ್ದಾರೆ: ಕೆ.ಹೆಚ್.ಮುನಿಯಪ್ಪ)