ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತಿಸುತ್ತೇವೆ. ಅದಕ್ಕೆ ಹೆದರಿಕೆಯಾಗಲಿ ಅಥವಾ ಆತಂಕವಾಗಲಿ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಪದ್ಮನಾಭನಗರದ ಗೌಡರ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರದ ಜೆಡಿಎಸ್ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ರಾಮನಗರಕ್ಕೆ ಹೊಸಬರಲ್ಲ. ಆ ಕ್ಷೇತ್ರದಲ್ಲೇ ಮನೆ ಇದೆ. ಕ್ಷೇತ್ರದಾದ್ಯಂತ ಪಕ್ಷದ ಸಂಘಟನೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಸಂಸದ ಡಿ ಕೆ ಸುರೇಶ್ ಸೇರಿದಂತೆ ಕಾಂಗ್ರೆಸ್ನಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಹೆದ್ದಾರಿ ಪೂರ್ಣವಾಗಿಲ್ಲ ಟೋಲ್ ಸಂಗ್ರಹ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲು ಮುಂದಾಗಿದ್ದಾರೆ. ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ಆದರೂ ಟೋಲ್ ಸಂಗ್ರಹಿಸುವುದು ಎಷ್ಟು ಸರಿ. ವೈಜ್ಞಾನಿಕವಾಗಿ ಕೂಡ ರಸ್ತೆ ನಿರ್ಮಾಣ ಮಾಡಿಲ್ಲ. ತಜ್ಱರ ಸಮಿತಿ ರಚಿಸಿ ರಸ್ತೆ ಸಮಸ್ಯೆಯನ್ನು ಸರಿಪಡಿಸಿದ ನಂತರ ಟೋಲ್ ಸಂಗ್ರಹಿಸಬಹುದು ಎಂದರು.
ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ನಾನು ಯಾರನ್ನೂ ಕೂಡ ಆಹ್ವಾನಿಸಿಲ್ಲ. ಆ ಬಗ್ಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ದೇವೇಗೌಡರ ಸಮ್ಮುಖದಲ್ಲಿ ಒಬೈದುಲ್ಲಾ ಸೇರ್ಪಡೆ: ಇಂದು ದೇವೇಗೌಡರ ಸಮ್ಮುಖದಲ್ಲಿ ಒಬೈದುಲ್ಲಾ ಅವರು ಸೇರ್ಪಡೆಯಾಗಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು. ಸರ್ವ ಧರ್ಮ ಸಮನ್ವಯ ಮಾಡುವಲ್ಲಿ ಇರುವ ಎತ್ತಿದ ಕೈ. ವಿಪಿ ಸಿಂಗ್, ಜಯಪ್ರಕಾಶ್ ನಾರಾಯಣ್ ಒಡನಾಡಿಯಾಗಿದ್ದರು ಎಂದು ಪ್ರಶಂಸಿಸಿದರು.
ಇಂಥ ಪ್ರಣಾಳಿಕೆಯನ್ನು ಹಿಂದೆ ಯಾವ ಸರ್ಕಾರ ಕೂಡ ಜನರ ಮುಂದೆ ಇಟ್ಟಿಲ್ಲ. ಇದನ್ನು ಮೆಚ್ಚಿ ಅವರು ಬಂದಿದ್ದಾರೆ. ಮುಂದಿನ ತಿಂಗಳಿಂದ ಅವರನ್ನು ರಾಜ್ಯ ಪ್ರವಾಸ ಮಾಡಿಸುತ್ತೇವೆ. ಅವರಷ್ಟೇ ಅಲ್ಲ ಅವರ ಟೀಂ ಕೂಡ ಬರಲಿದೆ. ಅವರ ಸೇರ್ಪಡೆ ನಮಗೆ ಒಂದು ಶಕ್ತಿ ಬಂದಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಜೆಡಿಎಸ್ಗೆ ಬೆಂಬಲ ನೀಡುತ್ತಿದ್ದಾರೆ. ಕುಪೇಂದ್ರ ರೆಡ್ಡಿಯವರು ರಾಜ್ಯಸಭೆಗೆ ನಿಂತಾಗ ನಮ್ಮ ಇಬ್ಬರು ಶಾಸಕರಿಗೆ ದುಡ್ಡು ಕೊಟ್ಟು ಬಿಜೆಪಿಗೆ ಮತ ಹಾಕಿಸಿದ್ದು ಕಾಂಗ್ರೆಸ್ ಅಲ್ಲವೇ? ಎಂದು ಪ್ರಶ್ನಿಸಿದ ಅವರು, ಎನ್ ಆರ್ ಸಿ, ಹಿಜಾಬ್ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದರೆ ಹೊರತು ಕಾಂಗ್ರೆಸ್ ಅವರು ಅಲ್ಲ. ನಾನು ಈ ವಿಚಾರ ಎತ್ತಿದಾಗ ಈ ಬಗ್ಗೆ ಮಾತನಾಡಬಾರದು ಅಂತ ಡಿ ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದರು ಎಂದು ಇಬ್ರಾಹಿಂ ಆರೋಪಿಸಿದರು.
ಮೂರು ಬಾರಿ ಅಲ್ಪಸಂಖ್ಯಾತರು ಜೆಡಿಎಸ್ ಅಧ್ಯಕ್ಷರು: ನೀವು ನಾವೆಲ್ಲಾ ಇದ್ದಾಗಲೇ ಸ್ಥಾನ ಕೊಡಲಿಲ್ಲ. ಈಗ ನಿಮ್ಮ ಬಳಿ ಒಬ್ಬ ಅಲ್ಪಸಂಖ್ಯಾತ ಮುಖಂಡರು ಇಲ್ಲ. ಜೊತೆಗೆ ಕರೆದುಕೊಂಡು ಹೋಗಲಿಕ್ಕೆ ಒಬ್ಬ ಮುಸ್ಲಿಂ ನಾಯಕ ಅಲ್ಲ. ಅಲ್ಪಸಂಖ್ಯಾತ ಅನ್ನೋ ಕಾರಣಕ್ಕಾಗಿಯೇ ನನಗೆ ಸ್ಥಾನ ಕೊಟ್ಟಿಲ್ಲ. ಜೆಡಿಎಸ್ ಮೂರು ಬಾರಿ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂಓದಿ:ಈಶ್ವರಪ್ಪ ಪ್ರಚೋದನಾಕಾರಿ ಭಾಷಣ ಆರೋಪ: ಕ್ರಮಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮುಸ್ಲಿಂ ಮುಖಂಡರ ಮನವಿ