ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಬೆಡ್ ಸ್ಕ್ಯಾಮ್ ನಡೆದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿ ಮೂರ್ನಾಲ್ಕು ದಿನ ಕಳೆದಿದೆ.
ಬೆಡ್ ಬ್ಲಾಕಿಂಗ್ ಇಡೀ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ, ಇದೀಗ ಪ್ರಕರಣ ಸಂಬಂಧ ಬಿಜೆಪಿ ಯೂಟರ್ನ್ ಹೊಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇವಲ ಬೆಡ್ ಸ್ಕ್ಯಾಮ್ ಅಲ್ಲ ಇದು ಬಿಜೆಪಿ ಬೆಡ್ ಸ್ಕ್ಯಾಮ್. ಅವರೇ ಹಗರಣ ಮಾಡಿ ಜನರ ಮುಂದೆ ನಾಟಕ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಗೂಂಡಾಗಳ ರೀತಿ ವರ್ತನೆ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಕುರ್ಚಿ ಉಳಿಸೋದೇ ಗೃಹ ಮಂತ್ರಿಗಳ ಕೆಲಸವಾಗಿದೆ. ಒಬ್ಬ ಐಎಎಸ್ ಅಧಿಕಾರಿಗೆ ರಕ್ಷಣೆ ಇಲ್ಲದಾಗಿದೆ. ಸರ್ಕಾರ ಲಾಯಕ್ಕಾ? ಅಥವಾ ನಾಲಾಯಕ್ಕಾ? ಎಂದಿದ್ದಾರೆ.
ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುವಾರ್ ಮಾತನಾಡಿ, ಕೋವಿಡ್ ಕಷ್ಟದ ಕಾಲದಲ್ಲಿ ಈ ರೀತಿ ನಾಟಕ ಮಾಡಲು ಸಮಯ ಎಲ್ಲಿತ್ತು. ತೇಜಸ್ವಿ ಸೂರ್ಯಗೆ ನಾಟಕ ಬರೆದು ಡೈಲಾಗ್ ಹೇಳೋದಕ್ಕೆ ಸಮಯ ಇತ್ತು ಎಂದು ವಾಗ್ದಾಳಿ ನೆಡೆಸಿದರು.
ಸಂಸದರಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು. ಪ್ರಚಾರದ ಭಾಷಣ, ಬೆಂಕಿ ಹಚ್ಚುವ ಕೆಲಸ ಮಾಡುವವರು ಸಂಸದರಾಗಲು ಅರ್ಹರಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೋವಿಡ್ ಬೆಡ್ ಬುಕ್ಕಿಂಗ್ ದಂಧೆ ತಡೆಯಲು ನೋಡಲ್ ಅಧಿಕಾರಿಗಳ ನಿಯೋಜನೆ