ಬೆಂಗಳೂರು: ದೊಡ್ಡ ಮಂತ್ರಿಯಾಗಿ ಆ ವಿಡಿಯೋ ಬಿಡುಗಡೆ ಮಾಡ್ತೇನಾ? ನನ್ನದು ನಾನೇ ಬಿಡುಗಡೆ ಮಾಡ್ತೇನಾ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾನು ಮಾಧ್ಯಮದಲ್ಲಿ ಆ ಯುವತಿಯ ವಿಡಿಯೋ ನೋಡಿದೆ. ವಿಡಿಯೋ ಬಗ್ಗೆ ಎಸ್ಐಟಿ ಅಧಿಕಾರಿಗಳೇ ತನಿಖೆ ಮಾಡ್ತಾರೆ. ನನಗೆ ರಕ್ಷಣೆ ಕೊಡಿ ಅಂತಾ ಮನವಿ ಮಾಡಿದ್ದಾರೆ. ಅವರ ಕುಟುಂಬ ಮತ್ತು ಅವಳಿಗೆ ರಕ್ಷಣೆ ಕೊಡುವಂತೆ ಎಸ್ಐಟಿ ಅಧಿಕಾರಿಗಳಿಗೆ ತಿಳಿಸಿದ್ದೀನಿ. ವೈಯಕ್ತಿಕವಾಗಿ ಏನೇ ಆರೋಪ ಮಾಡಬಹುದು. ತನಿಖೆಯಲ್ಲಿ ಏನು ಸಾಕ್ಷ್ಯ ಸಿಗುತ್ತೆ ಅನ್ನೋದರ ಮೇಲೆ ತನಿಖೆ ಮುಂದುವರೆಯುತ್ತದೆ ಎಂದಿದ್ದಾರೆ.
ಈ ವಿಡಿಯೋ ಮಾಡಿರೋದು ಷಡ್ಯಂತ್ರ. ನಾನು ಇನ್ನೂ ಯುವತಿಯ ಆ ವಿಡಿಯೋ ನೋಡಿಲ್ಲ. ಇವತ್ತು ಎಫ್ಐಆರ್ ಆಗಿ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡ್ತಾರೆ ಅಂದ್ರೆ ಯೋಚನೆ ಮಾಡಬೇಕು. ಯುವತಿ ದೂರು ಕೊಡ್ತಾರೆ ಅಂದರೆ ಕೊಡಲಿ. ನಾನು ಫೇಸ್ ಮಾಡುತ್ತೇನೆ. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಪೊಲೀಸರ ತನಿಖೆಯಲ್ಲಿ ನಿಮಗೆ ಗೊತ್ತಾಗಲಿದೆ. ದೂರು ಕೊಟ್ಟ ತಕ್ಷಣವೇ ವಿಡಿಯೋ ಮಾಡಿದ್ದಾರೆ. ನಾವು ಎಲ್ಲದಕ್ಕೂ ತಯಾರಾಗಿದ್ದೇವೆ. ನಾನು ನಿರಪರಾಧಿ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಇದ್ರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಅದು ಪಕ್ಕಾ ನಕಲಿ ಸಿಡಿ. ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಯುವತಿಯ ಬಗ್ಗೆ ಗೊತ್ತಿಲ್ಲ. ರಾಜಕೀಯವಾಗಿ ಮುಗಿಸಬೇಕು ಅಂತ ನೋಡ್ತಿದ್ದಾರೆ. ತನಿಖೆಯಲ್ಲಿ ಎಲ್ಲಾ ಗೊತ್ತಾಗಲಿದೆ. ಅದಷ್ಟು ಬೇಗ ತನಿಖೆ ನಡೆಸಿ ಅಂತಾ ಗೃಹ ಸಚಿವರ ಬಳಿ ಮನವಿ ಮಾಡಿದ್ದೇನೆ. ಆ ಯುವತಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.