ಬೆಂಗಳೂರು: ಜೆಡಿಎಸ್ ಪಕ್ಷದ ವಿರುದ್ಧ ನಿನ್ನೆ ಮಾತನಾಡಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕರ ಆಕ್ರೋಶ ಮುಂದುವರೆದಿದೆ.
ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಮಾಧ್ಯಮ ಪ್ರಕಟಣೆಯಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜೆಡಿಎಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡ ವಿರುದ್ಧ ಮಾತನಾಡಿರುವುದು ಸಿದ್ದರಾಮಯ್ಯಗೆ ಇದೀಗ ಮುಳುವಾಗುತ್ತಿದೆ.
ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಈ ಕುರಿತು ಟ್ವೀಟ್ ಮಾಡಿದ್ದು, ಅವಕಾಶವಾದಿ ತನವನ್ನು ರಹದಾರಿ ಮಾಡಿಕೊಂಡು ರಾಷ್ಟ್ರೀಯ ಪಕ್ಷಕ್ಕೆ ಸೇರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಸ್ವಾಭಿಮಾನ ಕೆಣಕುವುದು ತರವಲ್ಲ. ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಸ್ವಾರ್ಥ ರಾಜಕಾರಣದ ಬೀಜ ಬಿತ್ತಿದ ಅವರು ಹಿಂದೆ ಇದ್ದ ಪಕ್ಷ ಮತ್ತು ಈಗ ಇರುವ ಪಕ್ಷಕ್ಕೆ ಮಗ್ಗಲು ಮುಳ್ಳಾಗಿದ್ದಾರೆ. ಇಂಥ ನಾಯಕರಿಂದ ಯಾವ ಉಪದೇಶಾಮೃತ ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ.
ಏಕನಿಷ್ಠ ರಾಜಕಾರಣಿಯೊಬ್ಬರು ಆಡಬಹುದಾದ ಮಾತನ್ನು ಸಿದ್ದರಾಮಯ್ಯ ಅವರು ಹೇಳಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಪಠಿಸಿದಂತೆ ಎಂದು ಲೇವಡಿ ಮಾಡಿದ್ದಾರೆ.
ದೇವೇಗೌಡ ನಿಲುವು ರಾಜಕಾರಣಿಗಳಿಗೆ ಮಾದರಿ
ರಾಜ್ಯಸಭೆಯಲ್ಲಿ ಕನ್ನಡಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕನ್ನಡದ ಅಸ್ಮಿತೆಯನ್ನು ಪ್ರತಿಪಾದಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ. ರಮೇಶ್ ಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹಿಂದಿ ಹೇರಿಕೆಗೆ ಗುದ್ದು ನೀಡಿದ್ದಾರೆ. ನಾಡು,ನುಡಿ, ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ರುಜುವಾತು ಪಡಿಸುವ ದೇವೇಗೌಡ ನಿಲುವು ಎಲ್ಲ. ರಾಜಕಾರಣಿಗಳು ಮಾದರಿ ಎಂದು ರಮೇಶ್ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಕಂಡ ಅಪ್ರತಿಮ ನಾಯಕ ದೇವೇಗೌಡರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಡಿರುವ ಮಾತು ಅಕ್ಷಮ್ಯ. ಪಕ್ಷ ಹಾಗೂ ಪಕ್ಷದ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಆರೋಪಿಸಿದ್ದಾರೆ.