ಬೆಂಗಳೂರು: ಶಾಲೆಗಳನ್ನು ಆರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಲೆಗಳಲ್ಲಿ ಮಕ್ಕಳ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಯೂರೋಪ್ ರಾಷ್ಟ್ರಗಳಲ್ಲಿ ಸೋಂಕು ಕಡಿಮೆ ಆದ ಹಿನ್ನೆಲೆ ಶಾಲಾ, ಕಾಲೇಜುಗಳನ್ನು ಆರಂಭಿಸಲಾಗಿತ್ತು. ಆದರೆ ಇದೀಗ ಅಲ್ಲಿ ಶಿಕ್ಷಕರು, ಮಕ್ಕಳಿಗೆ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಮಾರಿ ಕಾಡುತ್ತಿದೆ. ಮಕ್ಕಳನ್ನು ಆಟ ಆಡುವುದರಿಂದ ನಿಯಂತ್ರಿಸಲು ಸಾಧ್ಯವಾ? ಒಂದೇ ಕಡೆ ಕುಳಿತು ಆಡುವುದು, ಊಟ ಸೇವಿಸುವುದನ್ನು ತಡೆಯಲು ಸಾಧ್ಯವಿಲ್ಲ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಸುಮ್ಮನಿರುವುದು ಉತ್ತಮ. ಆತುರಕ್ಕೆ ಬಿದ್ದು, ಮಕ್ಕಳ ಭವಿಷ್ಯದ ಜತೆ ಆಟವಾಡಬಾರದು. ಹೆಚ್ಚುತ್ತಿರುವ ಕೊರೊನಾ ಸಮಸ್ಯೆ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಲಿ. ಪಕ್ಷಾತೀತವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದೇವೆ ಎಂದರು.
ಆನ್ಲೈನ್ನಲ್ಲಿ ಒಂದನೇ ಕ್ಲಾಸ್ ಮಕ್ಕಳಿಗೆ ಹೇಗೆ ಪಾಠ ಹೇಳಲು ಸಾಧ್ಯ? ಲ್ಯಾಪ್ಟಾಪ್ ಎಲ್ಲರ ಬಳಿ ಇರಲು ಸಾದ್ಯವಿಲ್ಲ. ಖಾಸಗಿ ಶಾಲೆಯಲ್ಲಿ ಓದುವ ಕೆಲ ಮಕ್ಕಳ ಬಳಿ ಇರಬಹುದು. ಆದರೆ ಉಳಿದವರ ಬಳಿ ಇಲ್ಲ. ಸರ್ಕಾರ ಎಲ್ಲರಿಗೂ ಲ್ಯಾಪ್ಟಾಪ್ ವಿತರಿಸಿ ಆನ್ಲೈನ್ ಶಿಕ್ಷಣ ನೀಡಿಕೆಗೆ ಮುಂದಾಗಲಿ. ಈ ವ್ಯವಸ್ಥೆ ಜಾರಿಗೆ ಬಂದರೆ ಶೇ.25ರಷ್ಟು ಮಂದಿಗೆ ಮಾತ್ರ ಶಿಕ್ಷಣ ಸಿಗಲಿದೆ. ಸರ್ಕಾರ ಯೋಚಿಸಬೇಕೆಂದು ಹೇಳಿದರು.
ಲಾಕ್ಡೌನ್ ಜಾರಿಯಲ್ಲಿ ಇರುವವರೆಗೂ ಕೊರೊನಾ ನಿಯಂತ್ರಣದಲ್ಲಿತ್ತು. ಆಮೇಲೆ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದೆ. ನಿತ್ಯ ಹೆಚ್ಚಾಗುತ್ತಲೇ ಇದೆ. ದಿನೇ ದಿನೆ ಸೋಂಕಿತರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಚ್ಚುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಯೋಚಿಸಿ ಇನ್ನಷ್ಟು ದಿನ ಲಾಕ್ಡೌನ್ ಮುಂದುವರಿಸಬೇಕಿತ್ತು ಎನ್ನುವುದು ನನ್ನ ಸಲಹೆ. ಲಾಕ್ಡೌನ್ ಸಡಿಲೀಕರಣದಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂದರು.