ಬೆಂಗಳೂರು: ನಗರದ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಹರ್ಷಾನಂದ ಮಹಾರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಮಠದ ಆವರಣದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸ್ವಾಮಿ ಹರ್ಷಾನಂದರು ಮಠದ ಹಿರಿಯ ಸನ್ಯಾಸಿ ಆಗಿದ್ದರು. 1989ರಲ್ಲಿ ಮಠದ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದು, ಮಠದ ಆರನೇ ಅಧ್ಯಕ್ಷರಾದ ಸ್ವಾಮಿ ವಿರಾಜನಂದರಿಂದ ಮಂತ್ರದೀಕ್ಷೆಯನ್ನು ಪಡೆದಿದ್ದರು. ಸ್ವಾಮಿ ವಿಶುದ್ದಾನಂದರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.
ಬೆಂಗಳೂರು ಸೇರಿದಂತೆ ಮಂಗಳೂರು, ಮೈಸೂರು, ಬೇಲೂರು ಮಠ ಮತ್ತು ಅಲ್ಲಾಹಬಾದ್ ರಾಮಕೃಷ್ಣ ಮಠಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ.
ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಹಲವು ಪುಸ್ತಕ ಬರೆದಿದ್ದಾರೆ. ಇವರ ಹಲವು ಕೃತಿಗಳು ಫ್ರೆಂಚ್, ಕೋರಿಯನ್ ಮತ್ತು ಇಂಡೋನೇಷಿಯನ್ ಭಾಷೆಗಳಿಗೂ ಅನುವಾದವಾಗಿವೆ.
ಸ್ವಾಮಿ ಹರ್ಷಾನಂದ ಮಹಾರಾಜ್ ನಿಧನಕ್ಕೆ ಬಿಎಸ್ವೈ ಸಂತಾಪ:
ರಾಮಕೃಷ್ಣ ಮಠದ ಅಧ್ಯಕ್ಷ ಹಾಗೂ ಸ್ವಾಮಿಜಿ ಹರ್ಷಾನಂದ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರು ಅವರು. ಉತ್ತಮ ವಾಗ್ಮಿಗಳೂ ಆಗಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ. ಭಗವಂತನು ಅವರಿಗೆ ಮೋಕ್ಷವನ್ನು ಕರುಣಿಸಲಿ. ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಡಿಸಿಎಂ ಅಶ್ವತ್ಥ ನಾರಾಯಣ್ ಶೋಕ:
ಬಸವನಗುಡಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಹರ್ಷಾನಂದರು ವಿಧಿವಶರಾದ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಪ್ರಚಾರಕ್ಕೆ ಹಾಗೂ ಶ್ರೀ ರಾಮಕೃಷ್ಣ ಮಠದ ಶ್ರೇಯೋಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ಹರ್ಷಾನಂದರು ತಮ್ಮ ಸರಳತೆ ಹಾಗೂ ಸನ್ಯಾಸತ್ವದ ಪರಿಪೂರ್ಣತೆಯಿಂದಲೇ ಎಲ್ಲರಿಗೂ ಪೂಜನೀಯರಾಗಿದ್ದರು. ಅಂತಹ ಮಹಾನ್ ಚೇತನ ಅಗಲಿರುವುದು ನನಗೆ ತೀವ್ರ ದುಃಖವುಂಟು ಮಾಡಿದೆ. ನಮ್ಮೆಲ್ಲರನ್ನು ಸದಾ ಎಚ್ಚರಿಸುತ್ತಿದ್ದ ಚೇತನ, ಅರಿವಿನ ಬೆಳಕು ಇಲ್ಲವಾಗಿರುವುದು ನೋವುಂಟು ಮಾಡಿದೆ. ಆ ಮಹಾನ್ ಚೇತನಕ್ಕೆ ಚಿರಶಾಂತಿ ಸಿಗಲಿ ಭಕ್ತಿಯಿಂದ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಸಂತಾಪ ಸೂಚಿಸಿದ್ದಾರೆ.
ನಳೀನ್ ಕುಮಾರ್ ಕಟೀಲ್ ಸಂತಾಪ:
ಆಧ್ಯಾತ್ಮಿಕ ಕ್ಷೇತ್ರದ ಸಾಧಕರಾದ ಸ್ವಾಮಿ ಹರ್ಷಾನಂದರ ನಿಧನದಿಂದ ಹಿಂದೂ ಸಮಾಜ ಓರ್ವ ಶ್ರೇಷ್ಠ ಸಂತನನ್ನು ಕಳೆದುಕೊಂಡಂತಾಗಿದೆ. ಆ ಮಹಾನ್ ವ್ಯಕ್ತಿಗೆ ಚಿರಶಾಂತಿ ದೊರೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.