ಬೆಂಗಳೂರು: ಏ.10ರ ರಾಮನವಮಿಯಂದು ಬೆಂಗಳೂರಲ್ಲಿ ರಾಮ ರಥಯಾತ್ರೆ ಹಮ್ಮಿಕೊಂಡಿದ್ದೇವೆ. ಇದೇ ಮೊದಲ ಬಾರಿ ಇಲ್ಲಿ ರಥಯಾತ್ರೆ ಪ್ರಾರಂಭ ಮಾಡಲಾಗುತ್ತಿದೆ. ಜಾತ್ರೆ ವ್ಯಾಪಾರಕ್ಕೆ ಯಾವುದೇ ಸಮುದಾಯಕ್ಕೆ ನಿರ್ಬಂಧವಿರುವುದಿಲ್ಲ. ರಾಮನನ್ನು ಪ್ರೀತಿಸುವ ಯಾರು ಬೇಕಾದರೂ ವ್ಯಾಪಾರ ಮಾಡಬಹುದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ರಾಮರಥಯಾತ್ರೆಯಲ್ಲಿ 10 ಸಾವಿರ ಜನ ಭಾಗಿ: ಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 10ಕ್ಕೆ ರಾಮ ನವಮಿಯನ್ನು ಇಡೀ ಪ್ರಪಂಚದಲ್ಲಿ ಆಚರಣೆ ಮಾಡುತ್ತಾರೆ. ಅಂದೇ ಬೆಂಗಳೂರು ರಾಮ ರಥಯಾತ್ರೆ ಮಾಡುತ್ತೇವೆ. ಸುಮಾರು 4 ಕಿಲೋಮೀಟರ್ ರಥಯಾತ್ರೆ ಮಾಡುತ್ತೇವೆ. ತಮಿಳುನಾಡಿನ ಇಸ್ಕಾನ್ನವರು ರಥ ಕೊಡುತ್ತಾರೆ.
ಸುಮಾರು 10 ಸಾವಿರ ಜನ ಅಲ್ಲಿ ಭಾಗಿಯಾಗುತ್ತಾರೆ. ರಾಘವೇಂದ್ರ ಸ್ವಾಮಿಗಳು ರಥಯಾತ್ರೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಕನಕ ಪೀಠದ ಶ್ರೀ, ಬಸವ ಮಾಧಾರ ಚನ್ನಯ್ಯ ಸ್ವಾಮೀಜಿ ಬರುತ್ತಾರೆ. ಇದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಡುತ್ತಿದ್ದೇವೆ. ರಾಮ ರಥಯಾತ್ರೆ ನಿರಂತರವಾಗಿ ನಡೆಯುತ್ತದೆ. ಶನಿವಾರ, ಭಾನುವಾರ ಜಾನಪದ ಕಲೆ ಪ್ರದೇಶನ ನಡೆಯುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ ಎಂದು ಸಚಿವ ಅಶೋಕ್ ಹೇಳಿದರು.
'ಯಾರು ಬೇಕಾದರೂ ವ್ಯಾಪಾರ ಮಾಡಬಹುದು': ಏಪ್ರಿಲ್ 8, 9,10 ರಂದು ಜನಪದ ಉತ್ಸವ ಆಯೋಜನೆ ಮಾಡಿದ್ದು, ಪದ್ಮನಾಭನಗರದ ವಾಜಪೇಯಿ ಮೈದಾನದಲ್ಲಿ ಮೂರು ದಿನಗಳ ಉತ್ಸವ ಇದೆ. ಜಾನಪದ ಉತ್ಸವಕ್ಕೆ ಎಲ್ಲ ಧರ್ಮೀಯ ವ್ಯಾಪಾರಿಗಳಿಗೂ ಆಹ್ವಾನ ನೀಡಲಾಗುತ್ತದೆ. ನನ್ನ ಮನೆ ದೇವರು ಆಂಜನೇಯ, ಹಾಗಾಗಿ ನಾನು ರಾಮಭಕ್ತ. ಸರ್ವಧರ್ಮದವರು ಯಾರು ಬೇಕಾದರೂ ಯಾತ್ರೆಯಲ್ಲಿ ಭಾಗಿಯಾಗಬಹುದು. ಯಾರಿಗೂ ನಿರ್ಬಂಧವಿಲ್ಲ. ರಾಮನನ್ನು ಪ್ರೀತಿಸುವ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿ ಭೇಟಿ: ರಾಜ್ಯಕ್ಕೆ ಕೇಂದ್ರದಿಂದ ಸಿಕ್ಕಿದ್ದೇನು?
ಹಿಜಾಬ್ ವಿಚಾರದಲ್ಲಿ ವಿದೇಶಿ ಕೈವಾಡ: ಆಲ್ ಖೈದಾ ಸಂಘಟನೆಯ ವಿಡಿಯೋವನ್ನ ತನಿಖೆ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ನಾವು ಈಗಾಗಲೇ ತನಿಖೆ ಮಾಡುತ್ತಿದ್ದೇವೆ. ದೂರವಾಣಿ ಕರೆ ಎಲ್ಲಿಂದ ಬಂತು ಎನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತದೆ. ಹಿಜಾಬ್ ಸಂಬಂಧ 6 ಜನ ಯುವತಿಯವರು ಸುಪ್ರೀಂಕೋರ್ಟ್ಗೆ ಹೋದರು. ಆ ನ್ಯೂಸ್ ನಮ್ಮ ರಾಜ್ಯ ದೇಶದ ಚಾನೆಲ್ನಲ್ಲಿ ಬಂದಿಲ್ಲ. ಇಂಟರ್ ನ್ಯಾಷನಲ್ ಚಾನೆಲ್ನಲ್ಲಿ ಬಂತು. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗುತ್ತಿದೆ ಎಂದು ಹೇಳಿದರು.