ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಹಿನ್ನೆಲೆಯಲ್ಲಿ, ರಾಜ್ಯದ ವಿವಿಧೆಡೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಧಾರವಾಡ: ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಹಿನ್ನೆಲೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿದರು. ಧಾರವಾಡದ ತಮ್ಮ ನಿವಾಸದಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಮನೆಯಲ್ಲಿ ರಾಮನ ಭಾವಚಿತ್ರವಿಟ್ಟು, ಪೂಜೆ ಮಾಡಿದರು.
ಮಂಗಳೂರು: ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರಿನ ರಥಬೀದಿಯಲ್ಲಿ ಶ್ರೀರಾಮಧ್ವಜ ಅಳವಡಿಸಿರುವ ಬಲೂನ್ ಹಾರಾಟ ಮಾಡಿ ಕಾರ್ಯಕರ್ತರೊಂದಿಗೆ ಸಂಭ್ರಮ ಪಟ್ಟರು. ಈ ಸಂದರ್ಭ ಶಾಸಕರು ಎಲ್ಲರಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಬೀದರ್: ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರೆವೇರಿದ ನಂತರ, ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ಭೀತಿ ನಡುವೆ ಸಂಭ್ರಮಿಸಲಾಯಿತು. ನಗರದ ಕೆಇಬಿ ಹನುಮಾನ ಮಂದಿರದಲ್ಲಿ ರಾಮ, ಲಕ್ಷ್ಮಣ ಹಾಗೂ ಸೀತೆಯ ಫೋಟೊ ಇಟ್ಟು ರಾಮ ಭಕ್ತರು ವಿಶೇಷ ಪೂಜೆ ಮಾಡಿದರು. ಪೂಜೆ ಬಳಿಕ ಸಾರ್ವಜನಿಕರಲ್ಲಿ ಲಡ್ಡು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಬೆಳಗಾವಿ: ನಗರದ ರಾಮದೇವ ಗಲ್ಲಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಸೇನೆ ಹಿಂದೂಸ್ತಾನದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ವಾದ್ಯ ಮೇಳದೊಂದಿಗೆ ಭಜನೆ ಮಾಡುವ ಮೂಲಕ ಸಕಲ ಪೂಜಾ ವಿಧಾನ ಹಾಗೂ ಆರತಿ ಮಾಡಿ ರಾಮನಿಗೆ ಪೂಜೆ ಸಲ್ಲಿಸಲಾಯಿತು.
ಗದಗ: ಸಚಿವ ಸಿ.ಸಿ. ಪಾಟೀಲ್ ತಮ್ಮ ನಿವಾಸದಲ್ಲಿ ಶ್ರೀ ರಾಮ ನಾಮ ಜಪ ಮಾಡಿದರು. ಪತ್ನಿ, ಮಕ್ಕಳು ಮತ್ತು ಕುಟುಂಬ ಸದಸ್ಯರೆಲ್ಲರೂ ಸೇರಿ ಪೂಜೆ ಸಲ್ಲಿಸಿ ಶ್ರೀರಾಮ ನಾಮ ಜಪಿಸಿದರು. ನರಗುಂದ ಪಟ್ಟಣದಲ್ಲಿ ಇರುವ ಮನೆಯಲ್ಲಿ ರಾಮನಾಮ ಜಪಿಸಿ ಸಂಭ್ರಮಿಸಿದರು. ಜಿಲ್ಲೆಯ ಹಲವು ಕಡೆಗಳಲ್ಲಿ ರಾಮನ ಭಕ್ತರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ವಿಶೇಷ ಪೂಜೆ ಸಲ್ಲಿಸಿದ್ರು.
ಅದೇ ರೀತಿ ಮುಂಡರಗಿ ಪಟ್ಟಣದಲ್ಲೂ ಸಹ ಕೋಟೆ ಆಂಜನೇಯ ದೇವಸ್ಥಾನದಲ್ಲಿ ರಾಮ ಭಕ್ತರು, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆ ಮುಖಂಡರು ಹನುಮಾನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿದ್ರು.
ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರಿನ ಹನುಮಂತ ದೇವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಹೋಮದಲ್ಲಿ ಶ್ರೀರಾಮ ಭಕ್ತರು ಭಾಗವಹಿಸಿದ್ದರು.
ಬಳ್ಳಾರಿ: ಹೊಸಪೇಟೆ ತಾಲೂಕಿನ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಅರ್ಚಕರಾದ ಶ್ರೀನಾಥ, ಜೆ.ಶ್ರೀನಾಥ ಹಾಗೂ ಮುರಳೀಧರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾರವಾರ: ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ರಾಮಮಂದಿರ ಹಾಗೂ ಹನುಮಾನ್ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರವಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತ್ಯೇಕವಾಗಿ ನಗರದ ಮಾರುತಿ ಗಲ್ಲಿಯಲ್ಲಿರುವ ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶಾಸಕಿ ರೂಪಾಲಿ ನಾಯ್ಕ ಹಾಗೂ ಬಿಜೆಪಿ ಕಾರ್ಯಕರ್ತರು ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕಾರವಾರದ ಬಿಜೆಪಿ ಕಚೇರಿಯಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ, ಭಜನೆ ಮಾಡಿ ಅಯೋಧ್ಯೆ ರಾಮಮಂದಿರಕ್ಕಾಗಿ ಹೋರಾಟ ನಡೆಸಿದವರನ್ನು ಸ್ಮರಿಸಲಾಯಿತು.
ಬಳಿಕ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಹಾಗೂ ಕರಸೇವಕರಾಗಿ ದುಡಿದ ಅಜಯ್ ಸಾವುಕಾರ್, ಸೋಮು ವರ್ಣೇಕರ್, ಮಹೇಂದ್ರ ಬಾನಾವಳಿ, ರಾಮ ಅಂಕೋಲೆಕರ್, ರಾಜು ಫಡ್ನೇಕರ್ ಅವರಿಗೆ ಸನ್ಮಾನಿಸಲಾಯಿತು.
ಮಾಜಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಮಾರುತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಲ್ಲದೇ ಸಾರ್ವಜನಿಕರು ಕೂಡ ಜಿಲ್ಲೆಯ ವಿವಿಧೆಡೆ ಶ್ರಿರಾಮ ಮಂದಿರ ಹಾಗೂ ಹನುಮಾನ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಉಡುಪಿ: ಉಡುಪಿ ಶ್ರೀಕೃಷ್ಣನಿಗೆ ಪಟ್ಟಾಭಿರಾಮ ಅಲಂಕಾರ ಮಾಡಲಾಗಿದೆ. ಕಾಣಿಯೂರು ವಿದ್ಯಾವಲ್ಲಭ ತೀರ್ಥರಿಂದ ವಿಶೇಷ ಅಲಂಕಾರ ನೆರವೇರಿದ್ದು, ಬಿಲ್ಲು ಹಿಡಿದು ಸಿಂಹಾಸನದಲ್ಲಿ ಕುಳಿತ ರಾಮನ ಅಲಂಕಾರ ಮಾಡಲಾಗಿದೆ. ರಾಮನ ಪಕ್ಕದಲ್ಲಿ ಹನುಮ, ಲಕ್ಷ್ಮಣ, ಸೀತೆ ಮೂರ್ತಿ ಇಟ್ಟು ಪೂಜೆ ನೆರವೇರಿಸಲಾಗಿದ್ದು, ಪರ್ಯಾಯ ಅದಮಾರು ಶ್ರೀಗಳಿಂದ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.