ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ರಾಜ್ಯದ ಕೈ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮಧುಸೂದನ್ ಮಿಸ್ತ್ರಿ ಅವರಿಗೆ ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಹೇಳಿದ್ದೇವೆ. ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ಅಭಿಪ್ರಾಯ ಕೇಳಿದ್ದು, ನಾವು ತಿಳಿಸಿದ್ದೇವೆ ಎಂದರು. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯಾಗಿದೆ. ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಯಾರಿಗೆ ಬೇಕಿತ್ತು?
ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಸದ್ಯಕ್ಕೆ ಸಿಎಲ್ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರವಾಗಲ್ಲ. ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮತ್ತೆ ದೆಹಲಿಯಲ್ಲಿ ಹಿರಿಯ ನಾಯಕರ ಸಭೆ ನಡೆಸಿ, ತೀರ್ಮಾನ ಮಾಡಲಾಗುತ್ತದೆ ಎಂದರು. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ಏನೇನೋ ಕಾಯ್ದೆಯನ್ನು ತರ್ತಿದ್ದಾರೆ. ಬೇರೆ ದೇಶದಿಂದ ಬಂದವರನ್ನು ಏನ್ಮಾಡೋದು ಎಂದರು. ಮೊದಲು ಇಲ್ಲಿನವರಿಗೆ ಉದ್ಯೋಗ, ಅನ್ನ ಕೊಡಿ. ಅದು ಬಿಟ್ಟು 370, 380 ತಗೊಂಡು ಏನ್ಮಾಡೋದು ಎಂದು ಕೇಳಿದರು. ರಾಜ್ಯದಲ್ಲಿ ಮುಸ್ಲೀಮರಿಗೆ ಭಯ ಬೇಡ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ ಎಂದರು.