ಬೆಂಗಳೂರು: ನಗರದಲ್ಲಿ ಬಾರಿ ಮಳೆಯಿಂದ ಉಂಟಾದ ಸಮಸ್ಯೆಯನ್ನು ಬಗೆಹರಿಸಲು ಎಂಟು ವಲಯಗಳಿಗೆ ಸಚಿವರ ಉಸ್ತುವಾರಿ ನೇಮಕ ಮಾಡಿದ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ, ಮಹದೇವಪುರ ವಲಯ ಉಸ್ತುವಾರಿ ಹೊತ್ತಿರುವ ಭೈರತಿ ಬಸವರಾಜ್ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಸಂಸದರು, ಆ ವಲಯದ ಶಾಸಕರು ಸಭೆಗೆ ಗೈರಾಗಿದ್ದರು. ಮಹದೇಪುರ ವಲಯದಲ್ಲಿ ಮಳೆಯಿಂದ ಆಗಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಕೊಡುವ ಸಂಬಂಧ ಅಧಿಕಾರಿಗಳ ಜೊತೆ ಸಚಿವರು ಸಮಾಲೋಚನೆ ನಡೆಸಿದರು.
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಭೈರತಿ ಬಸವರಾಜ್ ಅವರು, ಮಹದೇವಪುರ ವಲಯದಲ್ಲಿ ಮಳೆಯಿಂದ ಉಂಟಾಗಿರುವ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ 110 ಕೋಟಿ ರೂ. ಅನುದಾನ ನೀಡಿದ್ದಾರೆ. ಈ ಹಣದಲ್ಲಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿರುವೆ. ಸದ್ಯಕ್ಕೆ ಸ್ವಲ್ಪ ಪರಿಹಾರ ಹಣ ನೀಡಲಾಗಿದೆ. ಉಳಿದ ಹಣವನ್ನು ಎರಡು ಮೂರು ದಿನಗಳಲ್ಲಿ ಕೊಡಲಾಗುವುದು. ಎಲ್ಲಾ ಸಮಸ್ಯೆಗಳು ಒಮ್ಮೆಗೆ ಸರಿಹೋಗಲ್ಲ. ಮಹದೇವಪುರ ವಲಯಕ್ಕೆ ಹೆಲ್ಪ್ ಲೈನ್ ತೆರೆಯಲು ನಿರ್ಧಾರ ಮಾಡಲಾಗಿದೆ.
285-12300, 285-12301 ಈ ಎರಡು ನಂಬರ್ ಹೆಲ್ಪ್ ಲೈನ್ ಗೋಸ್ಕರ ಇಟ್ಟಿದ್ದೇವೆ. ಸಾರ್ವಜನಿಕರು ಹೆಲ್ಪ್ ಲೈನ್ ಗೆ ಕರೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಹೆಲ್ಪ್ ಲೈನ್ ನೋಡಿಕೊಳ್ಳಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸಂಸದರು, ಶಾಸಕರು ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೇಗ ಸಭೆ ಮಾಡಬೇಕಾದ ಹಿನ್ನೆಲೆಯಲ್ಲಿ ಕೆಲವರಿಗೆ ಮಾಹಿತಿ ಕೊಟ್ಟಿರಲಿಲ್ಲ. ಮುಂದಿನ ಸಭೆಗೆ ಎಲ್ಲಾ ಶಾಸಕರು ಬರಲಿದ್ದಾರೆ. ಆದರೆ ಇಂದಿನ ಸಭೆಗೆ ಸಂಸದರಿಗೆ ಮಾಹಿತಿ ಕೊಟ್ಟಿರಲಿಲ್ಲ. ಮಹದೇವಪುರ ವಲಯದಲ್ಲಿ ಇಬ್ಬರು ಎಂಪಿಗಳು ಬರುತ್ತಾರೆ. ಶಾಸಕರಿಗೆ ಬೇರೆ ಕೆಲಸ ಇತ್ತು. ಹಾಗಾಗಿ ಇಂದಿನ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ: ಪರಿಷತ್ ಪಟ್ಟಿ ಬಿಡುಗಡೆಗೆ ವಿಜಯೇಂದ್ರ ಹೆಸರೇ ಅಡ್ಡಿಯಾಯ್ತಾ..?
ನಗರದಲ್ಲಿ ಮುಖ್ಯವಾಗಿ ಡ್ರೈನೇಜ್ ಸ್ವಚ್ಛ ಮಾಡುತ್ತೇವೆ. ಇರುವ ಡ್ರೈನೇಜ್ ಅಗಲ ಮಾಡಬೇಕು. ಬೆಂಗಳೂರು ಅರ್ಧದಷ್ಟು ನೀರು ಮಹದೇವಪುರ ವಲಯಕ್ಕೆ ಬರುತ್ತದೆ. ಹಾಗಾಗಿ ಇಲ್ಲಿ ಸಮಸ್ಯೆ ಸ್ವಲ್ಪ ಜಾಸ್ತಿ ಇದೆ. ಡ್ರೈನೆಜ್ ಅಗಲ ಮಾಡಿದರೆ ನೀರು ಹೊರಹೋಗಲು ಸುಲಭವಾಗುತ್ತದೆ. ರಿಯಲ್ ಎಸ್ಟೇಟ್ ಅವರಿಂದ ಸಮಸ್ಯೆ ಆಗುತ್ತಿದೆ ಅನ್ನುವ ಪ್ರಶ್ನೆಗೆ ನನ್ನ ವಲಯದಲ್ಲಿ ಆ ರೀತಿಯ ಇಲ್ಲ ಎಂದ ಸಚಿವರು, ನಮ್ಮ ಕ್ಷೇತ್ರದಲ್ಲಿ ರಾಜಕಾಲುವೆ ಒತ್ತುವರಿಯಾಗಿಲ್ಲ. ಸಾಯಿ ಲೇಔಟ್ ಗೆ ಅರ್ಧ ಬೆಂಗಳೂರಿನ ನೀರು ಹರಿದು ಬರುತ್ತದೆ. ರಾಜಕಾಲುವೆಗೆ ಸಿಎಂ 32 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ರಾಜಕಾಲುವೆಗೆ ನೀಡಿರುವ ಎಲ್ಲ ಅನುದಾನ ಬಳಸಿಕೊಂಡು ಮುಂದಿನ ಮಾರ್ಚ್, ಏಪ್ರಿಲ್ ಒಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದರು.