ಬೆಂಗಳೂರು : ರಾಜ್ಯದಲ್ಲಿ ಜೂನ್ 1ರಿಂದ ಆಗಸ್ಟ್ 16 ರವರೆಗೆ ವಾಡಿಕೆಯಂತೆ 601 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 472 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಶೇ. 22ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ತುಮಕೂರು ಜಿಲ್ಲೆ 0.0 ಮಿ.ಮೀ, ಬೆಂಗಳೂರು ಜಿಲ್ಲೆ 0.1 ಮಿ.ಮೀ, ಶಿವಮೊಗ್ಗ ಜಿಲ್ಲೆಯಲ್ಲಿ 1.9 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಕಳೆದ ವಾರದಿಂದ ಮುಂಗಾರು ದುರ್ಬಲವಾಗಿದ್ದು, ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ.
ಬೆಂಗಳೂರು ನಗರ, ಮೈಸೂರು, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ರಾಮನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಹಾವೇರಿ ಜಿಲ್ಲೆ ಸೇರಿ ರಾಜ್ಯದ ಒಟ್ಟು 14 ಜಿಲ್ಲೆಗಳು ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ರಾಜ್ಯದ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಬಹಳಷ್ಟು ಕಡೆಗಳಲ್ಲಿ ಮಳೆಗಾಲದಲ್ಲೇ ಬೇಸಿಗೆಯ ವಾತಾವರಣ ಕಂಡುಬರುತ್ತಿದೆ. ಒಂದೆಡೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದರೆ, ಕೆಲ ಕಡೆ ಮೊಳಕೆಗಳೂ ಸಹ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಬಿತ್ತನೆ ಮಾಡಲು ಸೂಕ್ತ ತೇವಾಂಶವಿಲ್ಲದೆ ರೈತರು ಕಂಗಾಲಾಗಿದ್ದಾರೆ.
ಜೂನ್ ತಿಂಗಳಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಂತೆ ಆಗಸ್ಟ್ನಲ್ಲೂ ದುರ್ಬಲವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಆಗುತ್ತಿದ್ದರೂ ವ್ಯಾಪಕ ಪ್ರಮಾಣದ ಮಳೆಯಾಗುತ್ತಿಲ್ಲ. ಹೀಗಾಗಿ ಎರಡು ವಾರದಿಂದ ರಾಜ್ಯದಲ್ಲಿ ಒಣ ಹವೆ ಮುಂದುವರೆದಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ರಾಜ್ಯದ ಬಹುತೇಕ ಭಾಗಗಳಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿ ಪ್ರಮುಖ ಜಲಾಶಯಗಳಲ್ಲಿ ಸರಾಸರಿ ಶೇ.50-80ರಷ್ಟು ನೀರು ಸಂಗ್ರಹವಾಗಿತ್ತು. ಮಳೆ ನಿಂತ ಮೇಲೆ ಜಲಾಶಯಗಳ ಒಳ ಹರಿವು ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸುವುದು ಕಷ್ಟವಾಗಲಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.79ರಷ್ಟು ಕಡಿಮೆ ಮಳೆಯಾಗಿದೆ. ಅದರಲ್ಲೂ ಅತಿ ಹೆಚ್ಚು ಮಳೆಯಾಗಬೇಕಿದ್ದ ಕರಾವಳಿ ಮತ್ತು ಮಲೆನಾಡಿನಲ್ಲಿ ಶೇ. 92ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಶೇ.50 ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ.76ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಆಗಸ್ಟ್ ಒಂದರಿಂದ ನಿನ್ನೆಯವರೆಗಿನ ಮಳೆ ಮಾಹಿತಿ ಅವಲೋಕಿಸಿದರೂ ರಾಜ್ಯದಲ್ಲಿ ಶೇ.72ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಲೆನಾಡಿನಲ್ಲಿ ಶೇ.80, ಕರಾವಳಿ ಶೇ.72, ಉತ್ತರ ಕರ್ನಾಟಕ ಶೇ.73 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.68ರಷ್ಟು ಮಳೆ ಕೊರತೆ ಎರಡು ವಾರದಲ್ಲಿ ಉಂಟಾಗಿದೆ. ಮುಂಗಾರು ಹಂಗಾಮು ಆರಂಭವಾಗುವ ಜೂನ್ 1ರಿಂದ ಆಗಸ್ಟ್ 16 ರವರೆಗಿನ ಮಳೆ ಬಿದ್ದಿರುವ ಮಾಹಿತಿ ಪರಿಗಣಿಸಿದರೂ ರಾಜ್ಯದಲ್ಲಿ ಶೇ.22 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಅವಧಿಯಲ್ಲಿ ಕರಾವಳಿ ಶೇ.18, ಮಲೆನಾಡು ಶೇ.37, ಉತ್ತರ ಒಳನಾಡು ಶೇ.9 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.18 ರಷ್ಟು ಮಳೆ ಕೊರತೆಯಾಗಿದೆ.
ಇನ್ನು, ಆಗಸ್ಟ್ 11 ರಿಂದ ಐದು ದಿನ ಮಳೆಯಾಗಲಿದೆ ಎಂಬ ಮುನ್ಸೂಚನೆ ಇತ್ತು. ಆದರೆ ಮಳೆಯಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇದೆ. ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಮುಂಗಾರು ದುರ್ಬಲಗೊಂಡಿದೆ. ಆದರೂ ಕುಡಿಯುವ ನೀರಿಗೆ ತೊಂದರೆಯಿಲ್ಲ. ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆಗಳಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದೆ. ಈಗಾಗಲೇ 61.72 ಲಕ್ಷ ಹೆಕ್ಟೇರ್ (ಶೇ.75 ರಷ್ಟು) ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಸಾಕಷ್ಟಿದ್ದು ರೈತರಿಗೆ ಯಾವುದೇ ತೊಂದರೆ ಇಲ್ಲ. ಪ್ರಸ್ತುತ ಬಿತ್ತನೆ ಬೀಜ ಬೇಡಿಕೆ 5.54 ಲಕ್ಷ ಕ್ವಿಂಟಲ್ ಇದ್ದು, 80,297 ಕ್ವಿಂಟಲ್ ಲಭ್ಯತೆ ಇದೆ. 3.22 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇನ್ನು ರಸಗೊಬ್ಬರ ಬೇಡಿಕೆ 31.18 ಲಕ್ಷ ಮೆಟ್ರಿಕ್ ಟನ್ ಇದ್ದು, 17,44 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. 13.74 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರೈತರಿಗೆ ಏಕೀಕೃತ ಕರೆ ಕೇಂದ್ರ ವ್ಯವಸ್ಥೆ; ಭೀಮಾ ಫಲ್ಸ್ ಬ್ರ್ಯಾಂಡ್‌ನ ತೊಗರಿ ಮಾರುಕಟ್ಟೆಗೆ